ಡೈಲಿ ವಾರ್ತೆ: 05/DEC/2023

ಚಿಕ್ಕಮಗಳೂರು ವಕೀಲರ ಮೇಲೆ ಪೋಲಿಸ್ ದೌರ್ಜನ್ಯ ಖಂಡಿಸಿ ಕುಂದಾಪುರ ವಕೀಲರ ಸಂಘದಿಂದ ಬೃಹತ್ ಪ್ರತಿಭಟನೆ

  • ವಕೀಲರ ಹಿತರಕ್ಷಣಾ ಕಾಯ್ದೆ ಅನುಷ್ಠಾನವಾಗಲಿ – ಬನ್ನಾಡಿ ಸೋಮನಾಥ ಹೆಗ್ಡೆ

ಕುಂದಾಪುರ: ಚಿಕ್ಕಮಗಳೂರು ಯುವ ವಕೀಲ ಪ್ರೀತಮ್ ಮೇಲೆ ನಡೆದ ಪೊಲೀಸ್ ದೌರ್ಜನ್ಯ ವಿರುದ್ದ ಹಾಗೂ ಅನ್ಯಾಯಕ್ಕೊಳಗಾದ ವಕೀಲ ಪ್ರೀತಮ್ ಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ಕುಂದಾಪುರ ಬಾರ್ ಅಸೋಸಿಯೇಷನ್ ವತಿಯಿಂದ ಕುಂದಾಪುರ ಜೆ.ಎಂ.ಎಫ್.ಸಿ ಕೋರ್ಟ್ ಆವರಣದ ಮುಂಭಾಗದಲ್ಲಿ ಮಂಗಳವಾರ ಬೆಳಿಗ್ಗೆ ಬೃಹತ್ ಪ್ರತಿಭಟನೆ ನಡೆಯಿತು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗ್ಡೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಚಿಕ್ಕಮಗಳೂರು ಯುವ ವಕೀಲ ಪ್ರೀತಮ್ ಹೆಲ್ಮೆಟ್ ಧರಿಸಿಲ್ಲ ಎನ್ನುವ ಸಣ್ಣ ಕಾರಣಕ್ಕೆ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಪೊಲೀಸರ ನಡೆ ಖಂಡನಿಯ. ಅಲ್ಲದೆ ಈ ಪ್ರಕರಣದಿಂದ ವಕೀಲರ ಸಮುದಾಯ ಕೂಡ ಬೆಚ್ಚಿ ಬೀಳುವಂಥ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ಪೊಲೀಸರು ಹಾಗೂ ವಕೀಲರು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ ಇರಬೇಕಾದವರು. ಆದರೆ ಇವತ್ತಿನ ದಿನಗಳಲ್ಲಿ ರಾಜ್ಯಾದ್ಯಂತ ಪೊಲೀಸರು ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ. ಇದರಿಂದ ವಕೀಲರಿಗೆ ಇನ್ನು ಯಾವ ರೀತಿಯಲ್ಲಿ ರಕ್ಷಣೆ ಸಿಗಲಿಕ್ಕೆ ಸಾಧ್ಯ ಇದೆ ಎಂದು ಪ್ರಶ್ನಿಸಿದರು.
ವಕೀಲರಿಗೆ ರಕ್ಷಣೆ ಸಿಗುವ ನಿಟ್ಟಿನಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆ ಅನುಷ್ಠಾನಗೊಳಿಸಲು ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಅಧ್ಯಕ್ಷ ಸೋಮನಾಥ್ ಹೆಗ್ಡೆ ಹೇಳಿದರು.
ಅಲ್ಲದೆ ಇಂದು ನಮ್ಮ ಬೇಡಿಕೆ ಚಿಕ್ಕಮಗಳೂರಿನಲ್ಲಿ ಯುವ ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸ ವಿರುದ್ದ ಪ್ರಕರಣ ಈಗಾಗಲೇ ದಾಖಲಾಗಿದೆ. ಆ ಪ್ರಕರಣದ ಆರೋಪಿ ಪೊಲೀಸರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಮಾತ್ರವಲ್ಲ, ಮೊನ್ನೆ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ರಸ್ತೆ ತಡೆ ನಡೆಸಿದ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇಂದು ಕುಂದಾಪುರ ಬಾರ್ ಅಸೋಸಿಯೇಷನ್ ವತಿಯಿಂದ
ಚಿಕ್ಕಮಗಳೂರು ಯುವ ವಕೀಲನ ಪರವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ವಕೀಲರಿಗೆ ಸೂಕ್ತವಾದ ರಕ್ಷಣೆ ಹಾಗೂ ಸೂಕ್ತವಾದ ನ್ಯಾಯ ಸಿಗಬೇಕು ಎಂದು ಈ ಮೂಲಕ ಅಗ್ರಹಿಸುತ್ತೇವೆ ಎಂದು ಸೋಮನಾಥ್ ಹೆಗ್ಡೆ ಹೇಳಿದರು. ನಂತರ ಕುಂದಾಪುರ ಉಪವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಉಪಾಧ್ಯಕ್ಷೆ ಶ್ರೀಮತಿ ಬೀನಾ ಜೋಸೆಫ್, ಜೊತೆ ಕಾರ್ಯದರ್ಶಿ ರಿತೇಶ್ ಬಿ., ಕೋಶಾಧಿಕಾರಿ ದಿನಕರ್ ಕುಲಾಲ್ ಹಾಲಾಡಿ ಹಾಗೂ ಬಾರ್ ಆಸೋಸಿಯೇಷನ್ ಹಿರಿಯ ಕಿರಿಯ ವಕೀಲರು ಹಾಜರಿದ್ದರು.