ಡೈಲಿ ವಾರ್ತೆ: 08/DEC/2023

ಕೋಟ: ಸಾಲ ವಸೂಲಾತಿಗೆ ನೋಟಿಸ್ ಜಾರಿಗೊಳಿಸಲು ಹೋದ ಬ್ಯಾಂಕ್ ಸಿಬ್ಬಂದಿ ಮೇಲೆ ಶಿಲೆ ಕಲ್ಲಿಂದ ಹಲ್ಲೆ, ದೂರು ದಾಖಲು!

ಆನಂದ ಶೆಟ್ಟಿ

ಕೋಟ: ಸಹಕಾರಿ ಬ್ಯಾಂಕ್ ಸಿಬ್ಬಂದಿಗಳು ಸಾಲಗಾರರೋರ್ವರ ನಿವಾಸಕ್ಕೆ ಸಾಲದ ಬಗ್ಗೆ ನೋಟಿಸು ಜಾರಿ ಮಾಡಲು ತೆರಳಿದ್ದಾಗ, ಸಾಲಗಾರ ಏಕಾಏಕಿ ರೊಚ್ಚಿಗೆದ್ದು ದುರ್ವರ್ತನೆ ತೋರಿ ಶಿಲೆ ಕಲ್ಲಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಕುಂದಾಪುರ ತಾಲೂಕಿನ ಬೇಳೂರುನಲ್ಲಿ ಡಿ. 7 ರಂದು ಗುರುವಾರ ನಡೆದಿದೆ.

ಕೋಟ ವ್ಯವಸಾಯ ಸಂಘದ ಮಾರಾಟಾಧಿಕಾರಿ ಸುರೇಶ್ ಕಾಂಚನ್ ಎಂಬವರು ಬೇಳೂರಿನ ಆನಂದ ಶೆಟ್ಟಿಯವರ ಮನೆಗೆ ಹೋಗಿ ಬ್ಯಾಂಕಿನ ನೋಟಿಸು ಜಾರಿ ಮಾಡಲು ಉಪಕ್ರಮಿಸಿದಾಗ, ಆನಂದ ಶೆಟ್ಟಿ ಕ್ರೋಧಗೊಂಡು, ಬ್ಯಾಂಕ್ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸುತ್ತಾ, “ನಿನ್ನ ನೋಟಿಸಿಗೆ ಬೆಂಕಿ ಬೀಳಲಿ, ನಿಮ್ಮದು ಕಳ್ಳರ ಬ್ಯಾಂಕ್. ಇಲ್ಲಿಂದ ಹೋಗದಿದ್ದರೆ ಕೊಲೆ ಮಾಡುತ್ತೇನೆ….” ಎಂದೆಲ್ಲ ಬಯ್ಯತೊಡಗಿದ.

ಇಷ್ಟಾದರೂ ಸಹನೆ ಕಳೆದುಕೊಳ್ಳದೆ ಸಿಬ್ಬಂದಿ ಬ್ಯಾಂಕಿನ ನೋಟಿಸು ಪಡೆದುಕೊಂಡು ಸ್ವೀಕೃತಿ ಕೊಡಿರಿ ಎಂದು ವಿನಂತಿಸಿದರು. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಆನಂದ ಶೆಟ್ಟಿ, ಬೈಗುಳನ್ನು ಮುಂದುವರೆಸುತ್ತಾ ಚೀಲದಲ್ಲಿ ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದ ಶಿಲೆ ಕಲ್ಲುಗಳಿಂದ ಸಿಬ್ಬಂದಿ ಮೇಲೆ ದಾಳಿ ನಡೆಸಿದ. ಪರಿಣಾಮವಾಗಿ ಸಿಬ್ಬಂದಿ ಸುರೇಶ್ ಕಾಂಚನ್ ಮೊಣಗೈಗೆ ಗಾಯವಾಗಿದೆ.

ಇದೀಗ ಬ್ಯಾಂಕ್ ಗ್ರಾಹಕ ಆನಂದ ಶೆಟ್ಟಿಯ ವಿರುದ್ಧ ಕರ್ತವ್ಯನಿರತ ಅಧಿಕಾರಿಯನ್ನು ನಿಂದಿಸಿ, ಹಲ್ಲೆ ಮಾಡಿ, ಕರ್ತವ್ಯಕ್ಕೆ ತಡೆಯೋಡ್ಡಿ ಜೀವ ಬೆದರಿಕೆ ಹಾಕಿದ ಬಗ್ಗೆ ದೂರು ದಾಖಲಿಸಲಾಗಿದೆ.
ಗಾಯಾಳು ಬ್ಯಾಂಕ್ ಮಾರಾಟಾಧಿಕಾರಿ ಸುರೇಶ್ ಕಾಂಚನ್ ಸೂಕ್ತ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.