ಡೈಲಿ ವಾರ್ತೆ: 08/DEC/2023

ಡಿ. 9,10; ಬಿ.ಸಿ.ರೋಡ್ ನಲ್ಲಿ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರ

ನೂರಾರು ಅಶಕ್ತರ ಭವಿಷ್ಯದ ಜೀವನಕ್ಕೆ ಬೆಳಕು ನೀಡಲಿದೆ ಬಂಟ್ವಾಳದ ಜಮೀಯ್ಯತುಲ್ ಫಲಾಹ್ ಸಂಸ್ಥೆ

ಬಂಟ್ವಾಳ : ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ವತಿಯಿಂದ ಬೆಂಗಳೂರಿನ ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಸಹಯೋಗದೊಂದಿಗೆ
ಕೈ ಕಾಲುಗಳಿಲ್ಲದ ಬಡ ಅಶಕ್ತರಿಗೆ ಉಚಿತ ಕೃತಕ ಕೈ ಕಾಲುಗಳ ಜೋಡಣಾ ಶಿಬಿರವು ಡಿಸೆಂಬರ್ 9 ಮತ್ತು 10 ರಂದು ಬಿ.ಸಿ. ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ.

ಈಗಾಗಲೇ ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಪರಿಶೀಲನೆ ಮಾಡಿರುವ ನೂರಕ್ಕೂ ಅಧಿಕ ವಿಕಲಚೇತನ ಫಲಾನುಭವಿಗಳು ಶಿಬಿರದ ನೋಂದಾವಣೆ ಮಾಡಿದ್ದು, ಎರಡು ದಿನಗಳ ಶಿಬಿರದಲ್ಲಿ ಅವರು ಕೃತಕ ಅವಯವಗಳನ್ನು ಪಡೆಯಲಿದ್ದಾರೆ.

ಅಪಘಾತದಿಂದ ಮತ್ತು ಜನಿಸುವಾಗಲೇ ಹಾಗೂ ಸಕ್ಕರೆ ಕಾಯಿಲೆ ಗ್ಯಾಂಗ್ರಿನ್ ನಂತಹ ವಿವಿಧ ಕಾಯಿಲೆಗಳಿಂದ ಅಂಗಾಂಗಗಳನ್ನು ಕಳಕೊಂಡ ಬಡವರಿಗೆ ಶಿಬಿರದಲ್ಲಿ ಅಳತೆ ತೆಗೆದು ಅದೇ ದಿನ ಜೈಪುರ್ ಬ್ರಾಂಡಿನ ಕೃತಕ ಅವಯವಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ ಎಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷರಾದ ರಶೀದ್ ವಿಟ್ಲ ತಿಳಿಸಿದ್ದಾರೆ.

ಶಿಬಿರವನ್ನು ಕರ್ನಾಟಕ ಮಾರ್ವಾಡಿ ಯೂತ್ ಫೆಡರೇಶನ್ ಅಧ್ಯಕ್ಷ ಎಫ್.ಆರ್. ಸಿಂಘ್ವಿ ಉದ್ಘಾಟಿಸಲಿದ್ದು, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ರಶೀದ್ ವಿಟ್ಲ ಅದ್ಯಕ್ಷತೆ ವಹಿಸುವರು.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ,
ಹಾಸನ ಜನಪ್ರಿಯ ಫೌಂಡೇಶನ್ ಅದ್ಯಕ್ಷ, ಮೂಳೆ ಶಸ್ತ್ರಚಿಕಿತ್ಸಕ ಡಾ. ವಿ.ಕೆ.ಅಬ್ದುಲ್ ಬಶೀರ್, ವಿಕಲ ಚೇತನರ ಸಂಘದ ಜಿಲ್ಲಾಧ್ಯಕ್ಷ ಮುರಳೀಧರ ನಾಯಕ್, ಜಮೀಯ್ಯತುಲ್ ಫಲಾಹ್ ಜಿಲ್ಲಾಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ಬಂಟ್ವಾಳ ಘಟಕದ ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ಸಹಿತ ಇನ್ನಿತರ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಬಂಟ್ವಾಳ ತಾಲೂಕು ಪಂಚಾಯತ್ ವಿಕಲ ಚೇತನರ ಪುನರ್ವಸತಿ ಕಾರ್ಯಕರ್ತ ಗಿರೀಶ್ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ, ಬಿ.ಸಿ. ರೋಡ್ ಸಹರಾ ಪಾಲಿಕ್ಲಿನಿಕ್ ವತಿಯಿಂದ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ನಡೆಸಲಾಗುತ್ತದೆ ಎಂದು ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾದ್ಯಕ್ಷ ರಶೀದ್ ವಿಟ್ಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.