ಡೈಲಿ ವಾರ್ತೆ: 13/DEC/2023
ಲೋಕಸಭೆಯಲ್ಲಿ ಸ್ಮೋಕ್ ಬಾಂಬ್- ಸಂಸತ್ತಿನ ಹೊರಗಡೆ ಪ್ರತಿಭಟಿಸುತ್ತಿದ್ದ ಇಬ್ಬರ ಬಂಧನ
ನವದೆಹಲಿ: ಲೋಕಸಭೆಯಲ್ಲಿ ಸ್ಮೋಕ್ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹಿಸಾರ್ ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ನ ಅಮೋಲ್ ಶಿಂಧೆ (25) ಎಂದು ಪೊಲೀಸರು ಗುರುತಿಸಿದ್ದಾರೆ.
ನಡೆದಿದ್ದೇನು..?: ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಇದಾದ ಬಳಿಕ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದರೆ, ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.
ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬ ಯುವಕರು ಕಲಾಪದ ವೇಳೆ ನುಗ್ಗಿರುವುದು ಎಂದು ತಿಳಿದು ಬಂದಿದೆ. ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ.