ಡೈಲಿ ವಾರ್ತೆ: ಫೆ./03/2026

ಕುಂದಾಪುರ| ಆಭರಣ ಅಂಗಡಿಯಲ್ಲಿ ಕಣ್ಣು ತಪ್ಪಿಸಿ ಚಿನ್ನದ ಸರ ದೋಚಿದ ಕಳ್ಳ; ಆರೋಪಿ ಬಂಧನ

ಕುಂದಾಪುರ: ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿಯ ಕೆಲಸಗಾರರ ಗಮನ ತಪ್ಪಿಸಿ ಚಿನ್ನದ ಸರ ಕಳವುಗೈದ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಮೇಶ್ (42) ಎಂದು ಗುರುತಿಸಲಾಗಿದೆ. ಕುಂದಾಪುರ ಶಾಸ್ತ್ರೀ ಸರ್ಕಲ್ ಸಮೀಪದ SPG Gold and Diamond ಅಂಗಡಿಗೆ ಬಂದ ಆರೋಪಿ, ಚಿನ್ನದ ಸರವನ್ನು ಪರಿಶೀಲಿಸುವ ನೆಪದಲ್ಲಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಸುಮಾರು 9 ಗ್ರಾಂ ತೂಕದ, ಅಂದಾಜು ರೂ.1.25 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿದ್ದಾನೆ.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 05/2026, ಕಲಂ 305 BNS ಅಡಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಕಳವುಗೈದ ಚಿನ್ನದ ಸರ ಹಾಗೂ ಆತನ ವಶದಲ್ಲಿದ್ದ ರೂ.33,000 ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.