ಡೈಲಿ ವಾರ್ತೆ: ಫೆ./03/2026

ಪೊಲೀಸ್ ಸೇವೆಯ ಜೊತೆ ಸಮಾಜಸೇವೆ: ರಕ್ತದಾನದಲ್ಲಿ ಮುಂಚೂಣಿಯ ಪ್ರಶಾಂತ್ ಪಡುಕರೆ

ಕೋಟ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಶಾಂತ್ ಪಡುಕರೆ ಅವರು ರಕ್ತದಾನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿ ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಇದುವರೆಗೆ 25 ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಹೆಮ್ಮೆ ಇವರದಾಗಿದ್ದು, ಪೊಲೀಸ್ ಕರ್ತವ್ಯದ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಊರಾದ ಮಣೂರು ಪಡುಕರೆಯಲ್ಲಿ ‘ಜೈ ಹಿಂದ್ ಕ್ರಿಕೆಟರ್ಸ್’ ಎಂಬ ಕ್ರಿಕೆಟ್ ಸಂಸ್ಥೆಯನ್ನು ಸ್ಥಾಪಿಸಿ ಬೆಳೆಸಿರುವ ಅವರು, ಸಂಸ್ಥೆಯ ಇಡೀ ಸದಸ್ಯರನ್ನು ರಕ್ತದಾನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ಇತ್ತೀಚೆಗೆ ಡಾಕ್ಟರ್ ಪ್ರಕಾಶ್ ತೋಳರ್ ಅವರ ಮುಂದಾಳತ್ವದಲ್ಲಿ ದಿವಂಗತ ಡಾಕ್ಟರ್ ಸತೀಶ್ ಪೂಜಾರಿ ಅವರ ಸ್ಮರಣಾರ್ಥವಾಗಿ ನಡೆದ ರಕ್ತದಾನ ಶಿಬಿರದಲ್ಲಿ ಜೈ ಹಿಂದ್ ಕ್ರಿಕೆಟ್ ಸಂಸ್ಥೆಯ ಎಲ್ಲಾ ಸದಸ್ಯರೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಜೈ ಹಿಂದ್ ಕ್ರಿಕೆಟ್ ಸಂಸ್ಥೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿ, ಅದರಿಂದ ಸಂಗ್ರಹವಾದ ಉಳಿದ ಹಣವನ್ನು ಬಡ ಕುಟುಂಬಗಳು, ಬಡ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೆರವಾಗುವ ಮೂಲಕ ಕ್ರೀಡೆ ಮತ್ತು ಮಾನವೀಯತೆಯ ಸಂಯೋಜನೆಯನ್ನು ಸಮಾಜಕ್ಕೆ ತೋರಿಸಿದೆ.

ಜೊತೆಗೆ ಕ್ರಿಕೆಟ್ ಪಂದ್ಯಾಟದೊಂದಿಗೆ ಅಂಗಾಂಗ ದಾನ ಮತ್ತು ನೇತ್ರದಾನ ಜಾಗೃತಿಯನ್ನು ಮೂಡಿಸಿ, ಕ್ರೀಡಾ ಕ್ಷೇತ್ರದಲ್ಲೇ ಹೊಸ ಇತಿಹಾಸ ನಿರ್ಮಿಸಿರುವ ಹೆಮ್ಮೆಯ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಪ್ರಶಾಂತ್ ಪಡುಕರೆ ಅವರ ಮುಂದಾಳತ್ವದ ಜೈ ಹಿಂದ್ ಕ್ರಿಕೆಟರ್ಸ್ ಸಂಸ್ಥೆ ಕ್ರೀಡೆಯ ಜೊತೆಗೆ ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವ ಮಾದರಿ ಸಂಘಟನೆಯಾಗಿದೆ.