ಡೈಲಿ ವಾರ್ತೆ: ಫೆ./03/2026

ಕೋಟ| ಮುಂಗಡ ಟಿಕೆಟ್ ಪಡೆದ ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್: ನಿರ್ವಾಹಕ – ಸ್ಥಳೀಯರ ನಡುವೆ ಜಟಪಟಿ!

ಕೋಟ: ಕೋಟ – ಮಣೂರುದಿಂದ ಬೆಂಗಳೂರು ಪ್ರಯಾಣಿಸಲು ಮುಂಗಡ ಟಿಕೆಟ್ ಮಾಡಿಕೊಂಡಿದ್ದ ಮಹಿಳೆ ಸೇರಿ ಮೂವರು ಪ್ರಯಾಣಿಕರನ್ನು ಬಿಟ್ಟು ಹೊರಟ ಖಾಸಗಿ ಬಸ್ಸಿನ ನಿರ್ಲಕ್ಷ್ಯ ವರ್ತನೆಗೆ ಸಂಬಂಧಿಸಿದಂತೆ, ಮಂಗಳವಾರ ಸಂಜೆ ಕೋಟದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.

ಮಂಗಳವಾರ ಸಂಜೆ ಮುರ್ಡೇಶ್ವರದಿಂದ ಬೆಂಗಳೂರು ತೆರಳುವ ಖಾಸಗಿ ಬಸ್ಸನ್ನು ಕೋಟ – ಮಣೂರು ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಯಾಣಿಕರನ್ನು ಬಸ್ ಚಾಲಕ ನಿಗದಿತ ನಿಲ್ದಾಣದಲ್ಲಿ ಏರಿಸದೆ, ಮಣೂರಿನಿಂದ ಸ್ವಲ್ಪ ಮುಂದೆ ಹೋಗಿ ಬಸ್ಸನ್ನು ನಿಲ್ಲಿಸಿದ್ದಾನೆ ಎನ್ನಲಾಗಿದೆ.
ಇದರಿಂದ ಗಲಿಬಿಲಿಗೊಂಡ ಪ್ರಯಾಣಿಕರು ಮುಂದಕ್ಕೆ ನಿಲ್ಲಿಸಿದ್ದ ಬಸ್ಸಿನ ಬಳಿ ತೆರಳಿ, ಚಾಲಕನನ್ನು ಪ್ರಶ್ನಿಸಿದಾಗ, ಬಸ್ ನಿರ್ವಾಹಕ ಮಧ್ಯ ಪ್ರವೇಶಿಸಿ ಮಹಿಳೆ ಹಾಗೂ ಯುವಕರೊಂದಿಗೆ ಅವಾಚ್ಯ ಶಬ್ದ ಬಳಸಿ ಅವಾಚ್ಯವಾಗಿ ವರ್ತಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ನಿರ್ವಾಹಕನ ವರ್ತನೆಗೆ ಕೋಪಗೊಂಡ ಪ್ರಯಾಣಿಕರು ತಮ್ಮ ಮನೆಯವರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬಸ್ಸನ್ನು ಕೋಟ ಪೆಟ್ರೋಲ್ ಬಂಕ್ ಸಮೀಪ ತಡೆದು ನಿಲ್ಲಿಸಿದರು. ಈ ವೇಳೆ ನಿರ್ವಾಹಕ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿ, ಬಳಿಕ ಜಟಪಟಿಗೆ ತಿರುಗಿತು.
ಪರಿಸ್ಥಿತಿ ಕೈ ಮೀರಬಹುದಾದ ಹಂತಕ್ಕೆ ತಲುಪುತ್ತಿದ್ದಂತೆಯೇ ಕೋಟ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಧ್ಯ ಪ್ರವೇಶಿಸಿದರು.

ಪೊಲೀಸರು ಪ್ರಕರಣವನ್ನು ತಿಳಿಗೊಳಿಸಿ, ಪ್ರಯಾಣಿಕರು ಪಾವತಿಸಿದ್ದ ಮುಂಗಡ ಟಿಕೆಟ್ ಹಣವನ್ನು ವಾಪಸು ಕೊಡಿಸಿದರು. ಬಳಿಕ ಬಸ್ಸಿಗೆ ಮುಂದಿನ ಪ್ರಯಾಣಕ್ಕೆ ಅನುಮತಿ ನೀಡಲಾಯಿತು.

ಘಟನೆಯಲ್ಲಿ ಅವಮಾನಕ್ಕೊಳಗಾದ ಮೂವರು ಪ್ರಯಾಣಿಕರು ಬಳಿಕ ಬೇರೆ ಬಸ್ಸಿನಲ್ಲಿ ಬೆಂಗಳೂರು ಕಡೆ ಪ್ರಯಾಣ ಮುಂದುವರಿಸಿದರು. ಖಾಸಗಿ ಬಸ್ ಸಿಬ್ಬಂದಿಯ ಅಸಭ್ಯ ವರ್ತನೆ ಮತ್ತು ನಿರ್ಲಕ್ಷ್ಯ ಕ್ರಮದ ವಿರುದ್ಧ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.