
ಡೈಲಿ ವಾರ್ತೆ: ಫೆ./03/2026
ಸಿದ್ದಾಪುರ| ಅನೈತಿಕ ಸಂಬಂಧದ ಗಲಾಟೆ ಕೊಲೆಯಲ್ಲಿ ಅಂತ್ಯ: ಖ್ಯಾತ ಜ್ಯೋತಿಷಿ ಸೇರಿ 7 ಮಂದಿಯ ವಶಕ್ಕೆ

ಕಾರವಾರ: ಖ್ಯಾತ ಜ್ಯೋತಿಷಿಯೊಂದಿಗೆ ಮಹಿಳೆಯ ಅನೈತಿಕ ಸಂಬಂಧ ವಿಚಾರವಾಗಿ ಉಂಟಾದ ಗಲಾಟೆ ಭೀಕರ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಅವರಗುಪ್ಪ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ವಸಂತ್ ನಾಯ್ಕ (41) ಎಂಬವರು ಮೃತರಾಗಿದ್ದು, ಮಹೇಶ್ ನಾಯ್ಕ್ ಹಾಗೂ ಕುಮಾರ್ ಎಂಬ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮೂಲದ ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಸೇರಿ ಒಟ್ಟು ಏಳು ಮಂದಿಯನ್ನು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮೃತ ವಸಂತ್ ನಾಯ್ಕ್ ಅವರ ಅತ್ತಿಗೆ ಸಂಧ್ಯ ನಾಯ್ಕ್ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಗೊಂಡ ಮಹೇಶ್ ಮತ್ತು ಕುಮಾರ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸ್ ಮಾಹಿತಿ ಪ್ರಕಾರ, ಸುಚಿತ್ರಾ ಎಂಬ ಮಹಿಳೆ ಗಂಡನಿಂದ ಬೇರ್ಪಟ್ಟು ಶಿವಮೊಗ್ಗದಲ್ಲಿರುವ ಜ್ಯೋತಿಷಿ ಕಮಲಾಕರ ಭಟ್ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ನಡುವೆ ಅಕ್ರಮ ಸಂಬಂಧವಿರುವ ಬಗ್ಗೆ ಸುಚಿತ್ರಾ ಮಗಳಿಗೆ ತಿಳಿದಿತ್ತು. ಈ ವಿಚಾರವನ್ನು ಮಗಳು ತಂದೆ ಮಹೇಶ್ ನಾಯ್ಕ್‌ಗೆ ತಿಳಿಸಿದ್ದಾಳೆ. ಬಳಿಕ ಮಗಳು ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿರುವ ಚಿಕ್ಕಪ್ಪ ವಸಂತ್ ನಾಯ್ಕ್ ಮನೆಗೆ ತೆರಳಿದ್ದಳು.
ಮಗಳನ್ನು ಹುಡುಕಿಕೊಂಡು ಸುಚಿತ್ರಾ, ಜ್ಯೋತಿಷಿ ಕಮಲಾಕರ ಭಟ್ ಹಾಗೂ ಕೆಲ ಯುವಕರೊಂದಿಗೆ ವಾಹನದಲ್ಲಿ ವಸಂತ್ ನಾಯ್ಕ್ ಮನೆಗೆ ಆಗಮಿಸಿದ್ದು, ಈ ವೇಳೆ ಸುಚಿತ್ರಾ ಹಾಗೂ ಆಕೆಯ ಪತಿ ಮಹೇಶ್ ನಡುವೆ ತೀವ್ರ ವಾಗ್ವಾದ ನಡೆದಿದೆ.
ಗಲಾಟೆ ತಾರಕಕ್ಕೆ ಹೋಗುತ್ತಿದ್ದಂತೆ, ಸುಚಿತ್ರಾ ಜೊತೆ ಬಂದಿದ್ದ ಯುವಕರು ಮಧ್ಯಪ್ರವೇಶಕ್ಕೆ ಮುಂದಾದ ವಸಂತ್ ನಾಯ್ಕ್ ಮೇಲೆ ಚಾಕು ದಾಳಿ ನಡೆಸಿದ್ದು, ಅಲ್ಲದೇ ಮಹೇಶ್ ನಾಯ್ಕ್ ಹಾಗೂ ಪಕ್ಕದ ಮನೆಯ ಕುಮಾರ್ ಮೇಲೂ ಚಾಕು ಇರಿದು ಗಂಭೀರ ಗಾಯಗೊಳಿಸಿದ್ದಾರೆ.
ಚಾಕು ಇರಿತದಿಂದ ತೀವ್ರ ಗಾಯಗೊಂಡ ವಸಂತ್ ನಾಯ್ಕ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ. ಉಳಿದಿಬ್ಬರು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣದಲ್ಲಿ ಎ1 ಸುಚಿತ್ರಾ, ಎ2 ಲೋಕನಾಥ ಚೌಡಪ್ಪ ನಾಯ್ಕ್, ಎ3 ಅಪರಿಚಿತ ಆರೋಪಿಗಳು ಹಾಗೂ ಎ4 ಜ್ಯೋತಿಷಿ ಕಮಲಾಕರ ಭಟ್ ಸ್ವಾಮೀಜಿ ಸೇರಿದಂತೆ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.