
ಡೈಲಿ ವಾರ್ತೆ: ಫೆ./03/2026
ಮಂಜೇಶ್ವರ| ಕೌಟುಂಬಿಕ ಕಲಹದಲ್ಲಿ ಯುವತಿ ಸೇರಿ ಇಬ್ಬರ ಬಲಿ – ಆರೋಪಿ ಉಮರ್ ಫಾರೂಖ್ ಬಂಧನ

ಕಾಸರಗೋಡು, ಫೆ.03: ಕೌಟುಂಬಿಕ ಕಲಹವು ಭೀಕರ ದ್ವಿಹತ್ಯೆಗೆ ಕಾರಣವಾದ ಘಟನೆ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ತೂಮಿನಾಡು ಪ್ರದೇಶದಲ್ಲಿ ನಡೆದಿದೆ.
ಜಗಳವನ್ನು ಶಮನಗೊಳಿಸಲು ಮುಂದಾದ ಯುವತಿ ಸೇರಿ ಇಬ್ಬರು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಜುಮೈಲ (18) ಹಾಗೂ ಶೇಕುಂಞ (55) ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯಾದ ಉಮರ್ ಫಾರೂಖ್ ಅನ್ನು ಮಂಜೇಶ್ವರ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಆರೋಪಿ ಉಮರ್ ಫಾರೂಖ್ ಹಾಗೂ ಪತ್ನಿ ತಾಹಿರಾ ನಡುವೆ ದೀರ್ಘಕಾಲದಿಂದ ಕೌಟುಂಬಿಕ ಕಲಹ ನಡೆಯುತ್ತಿದ್ದು, ವಿಚ್ಛೇದನದ ಮಾತುಕತೆ ಕೂಡ ನಡೆದಿತ್ತು. ಈ ವೇಳೆ ತನ್ನ ಹೆಸರಿಗೆ ಆಸ್ತಿ ವರ್ಗಾಯಿಸುವಂತೆ ಉಮರ್ ಫಾರೂಖ್ ಒತ್ತಾಯಿಸಿದ್ದಾನೆ ಎನ್ನಲಾಗಿದೆ.
ಇದೇ ವಿಚಾರವಾಗಿ ನಿನ್ನೆ ಉಮರ್ ಫಾರೂಖ್ ಹಾಗೂ ಆತನ ಬಾವ ಶೇಕುಂಞ ನಡುವೆ ತೀವ್ರ ವಾಗ್ವಾದ ಉಂಟಾಗಿ, ಅದು ವಿಕೋಪಕ್ಕೆ ತಿರುಗಿದೆ.
ಜಗಳವನ್ನು ಬಿಡಿಸಲು ಮಧ್ಯಪ್ರವೇಶಿಸಿದ ಪುತ್ರಿ ಜುಮೈಲಗೆ ಕತ್ತಿಯಿಂದ ತೀವ್ರ ಗಾಯವಾಗಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆರೋಪಿ ಉಮರ್ ಫಾರೂಖ್ ಕೆಲ ತಿಂಗಳ ಹಿಂದಷ್ಟೇ ವಿದೇಶದಿಂದ ಹಿಂದಿರುಗಿದ್ದು, ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇರಿದಂತೆ ಮಾದಕ ದ್ರವ್ಯಗಳ ವ್ಯಸನಿಯಾಗಿದ್ದ ಎನ್ನುವ ಆರೋಪಗಳು ಕೇಳಿಬಂದಿವೆ.
ಪ್ರಕರಣದ ಹಿನ್ನೆಲೆ ಮತ್ತು ಉದ್ದೇಶಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ದ್ವಿಹತ್ಯೆಯಿಂದಾಗಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿದೆ.