ಡೈಲಿ ವಾರ್ತೆ: 14/DEC/2023
ಆನೆಗುಡ್ಡೆ ಶ್ರೀ ವಿನಾಯಕ ಬ್ರಹ್ಮ ರಥೋತ್ಸವ – ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಕುಂಭಾಸಿ : ಎಲ್ಲ ಕಲೆಗಳು ಮತ್ತು ಕಲಾವಿದರಿಗೆ ಹಿಂದೆ ರಾಜಾಶ್ರಯವಿತ್ತು. ಈಗ ದೇವಸ್ಥಾನಗಳೇ ಕಲಾ ಪೋಷಣೆಯ ಕೇಂದ್ರಗಳಾಗಿವೆ. ಉತ್ಸವಗಳ ಪರ್ವ ಕಾಲದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯಗಳಲ್ಲಿ ಏರ್ಪಡಿಸುವುದರಿಂದ ದೇವರ ಸೇವೆ, ಮನರಂಜನೆ ಜೊತೆಗೆ ಕಲೆಗಳ ಪುನರುಜ್ಜೀವನಕ್ಕೂ ಕಾರಣವಾಗುತ್ತದೆ – ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ವಿಶ್ರಾಂತ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಾಲಯದ ಬ್ರಹ್ಮ ರಥೋತ್ಸವದಂಗವಾಗಿ ನಡೆಯುವ ಸರಣಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಶುಭ ಹಾರೈಸಿದರು.
ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಮಾತನಾಡಿ, ದೇವಳದ ವಾರ್ಷಿಕ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ವಿವಿಧೆಡೆಗಳಿಂದ ಭಕ್ತಾಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸುತ್ತಾರೆ. ಅವರಿಗೆ ಅನುಕೂಲತೆಗಳನ್ನು ಕಲ್ಪಿಸುವುದರೊಂದಿಗೆ ನಮ್ಮ ಶ್ರೀಮಂತ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವುದಕ್ಕಾಗಿ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಹೃದಯ ದಾನಿಗಳು ಪ್ರಾಯೋಜಕತ್ವ ವಹಿಸಿದರೆ ಮುಂದಿನ ದಿನಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲು ಅನುವಾಗುತ್ತದೆ ಎಂದರು.
ಅನುವಂಶಿಕ ಪರ್ಯಾಯ ಅರ್ಚಕ ಕೆ. ಶ್ರೀಶ ಉಪಾಧ್ಯಾಯ ಶುಭ ಹಾರೈಸಿದರು.
ಆಡಳಿತ ಮಂಡಳಿಯ ಸದಸ್ಯರು, ಅರ್ಚಕ ವೃಂದದವರು ಉಪಸ್ಥಿತರಿದ್ದರು. ದೇವಾಲಯದ ಮ್ಯಾನೇಜರ್ ನಟೇಶ್ ಕಾರಂತ ಸ್ವಾಗತಿಸಿ, ವಂದಿಸಿದರು.
ನಂತರ ಕುಂಭಾಸಿಯ ಶ್ರೀ ವಿಶ್ವೇಶ್ವರ ಭಜನಾ ಮಂಡಳಿಯ ಮಹಿಳೆಯರು ಮತ್ತು ಮಕ್ಕಳಿಂದ ಭಜನೆ, ಹಂಗಳೂರಿನ ಓಂಕಾರ ನಾಟ್ಯ ಬಳಗದ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ಡಿ. 16 ನೇ ಮಾರ್ಗಶಿರ ಶುದ್ಧ ಚತುರ್ಥಿ, ಶನಿವಾರ ಬ್ರಹ್ಮ ರಥೋತ್ಸವ ನಡೆಯಲಿದೆ. ಪ್ರತಿದಿನ ವಿಶೇಷ ಪೂಜೆಗಳು, ಉತ್ಸವ, ಸಂಜೆ ವಿಭಿನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.