ಡೈಲಿ ವಾರ್ತೆ: 16/DEC/2023
ಮಾರ್ನಬೈಲ್ ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ ನ 7ನೇ ವಾರ್ಷಿಕೋತ್ಸವ
ಬಂಟ್ವಾಳ : ಮಾರ್ನಬೈಲ್ ಎಸ್.ಎಂ.ಆರ್. ಪಬ್ಲಿಕ್ ಸ್ಕೂಲ್ 7 ನೇ ವಾರ್ಷಿಕೋತ್ಸವ ಶನಿವಾರ ಶಾಲಾ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಯುನಿಟಿ ಆಸ್ಪತ್ರೆಯ ಚೇರ್ಮೇನ್ ಡಾ. ಸಿ.ಪಿ. ಹಬೀಬ್ ರಹ್ಮಾನ್ ಮಾತನಾಡಿ, ಮಕ್ಕಳ ಶಿಕ್ಷಣದ ಪ್ರಗತಿಗೆ ಶಾಲೆ ಎಷ್ಟು ಮುಖ್ಯವೋ ಮನೆಯೂ ಅಷ್ಟೇ ಮುಖ್ಯವಾಗಿದೆ. ಪೋಷಕರು ಮಕ್ಕಳ ಮೇಲಿನ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕೇವಲ ನಗರ ಪ್ರದೇಶದಲ್ಲಿ ಮಾತ್ರ ದೊರಕುತ್ತಿದ್ದ ಆಂಗ್ಲ ಮಾಧ್ಯಮ ಶಿಕ್ಷಣ ಇದೀಗ ಗ್ರಾಮೀಣ ಪ್ರದೇಶಗಳಲ್ಲೂ ಲಭಿಸುವಂತಾಗಿದೆ.
ಮಹಿಳೆಯರ ಶಿಕ್ಷಣಕ್ಕೆ ಆದ್ಯತೆ ನೀಡಿದ ರಶೀದ್ ಹಾಜಿಯವರು ಮಕ್ಕಳ ಶಿಕ್ಷಣಕ್ಕೂ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಎಂ.ಆರ್. ಎಜ್ಯುಕೇಶನ್ ಅಕಾಡೆಮಿ ಚೇರ್ಮೇನ್ ಡಾ| ಎಸ್.ಎಂ.ರಶೀದ್ ಹಾಜಿ ಮಾತನಾಡಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಎಲ್.ಕೆ.ಜಿ ಯಿಂದ ಡಿಗ್ರಿ ತನಕ ಕಲಿಕೆಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಪೋಷಕರು ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ ಮುಂದಕ್ಕೂ ತಮ್ಮೆಲ್ಲರ ಸಹಕಾರ ಅತೀ ಅಗತ್ಯ ಎಂದರು.
ಸೌದಿ ಅರೇಬಿಯಾ ಎನರ್ಜಿಯಾ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಟಿ.ಎಚ್.ಮೆಹಬೂಬ್ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಕಾರ್ಯದರ್ಶಿ ರಿಫಾತ್ ಅಹಮದ್, ಮೆಲ್ಕಾರ್ ಮಹಿಳಾ ಕಾಲೇಜು ಪ್ರಾಂಶುಪಾಲ ಬಿ.ಕೆ.ಅಬ್ದುಲ್ ಲತೀಫ್, ಎಸ್.ಎಂ.ಆರ್ ಶಾಲಾ ಮುಖ್ಯ ಶಿಕ್ಷಕಿ ಫಾತಿಮತುಲ್ ಝಾಹಿರಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಂದೀಪ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಹಲೀಮಾ ನಿಶಾತ್ ಸ್ವಾಗತಿಸಿ, ನವ್ಯಶ್ರೀ ವಂದಿಸಿದರು. ಅನಿಷಾ ಕಾರ್ಯಕ್ರಮ ನಿರೂಪಿಸಿದರು.