ಡೈಲಿ ವಾರ್ತೆ: ಫೆ./02/2026

ಒತ್ತಡಗಳಿಗೆ ಮಣಿಯದೆ ಸಮಾಜಹಿತಕ್ಕಾಗಿ ಪತ್ರಿಕಾ ಧರ್ಮ ಪಾಲಿಸಬೇಕು: ಶ್ರೀ ಮಾರುತಿ ಗುರೂಜಿ

ಭಟ್ಕಳ: ಪತ್ರಕರ್ತರು ಯಾವುದೇ ಒತ್ತಡಕ್ಕೂ ಮಣಿಯದೆ ಸಮಾಜದ ಹಿತವನ್ನು ಮೊದಲಿಗಿಟ್ಟು ಪತ್ರಿಕಾ ಧರ್ಮವನ್ನು ನಿಷ್ಠೆಯಿಂದ ಪಾಲಿಸಬೇಕು. ಸತ್ಯನಿಷ್ಠ ಲೇಖನಿಯಲ್ಲಿ ಚ್ಯುತಿ ಉಂಟಾದರೆ ಅದರ ಪರಿಣಾಮ ಸಮಾಜದ ಮೇಲೆ ಗಂಭೀರವಾಗಿ ಬೀರುವ ಸಾಧ್ಯತೆ ಇದೆ ಎಂದು ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರಿಸಿದರು.

ನಗರದ ಶ್ರೀ ನಾಗಯಕ್ಷ ಧರ್ಮಾರ್ಥ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ಕಾನಿಪ ಧ್ವನಿ) ಸಂಘಟನೆಯ ಭಟ್ಕಳ ಘಟಕದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿರುವ ಅಸಮತೋಲನಗಳನ್ನು ಸರಿಪಡಿಸುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ದಿಸೆಯಲ್ಲಿ ಎಲ್ಲ ಪತ್ರಕರ್ತರೂ ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮವು ರಾಜ್ಯದ ನೈಜ ಸ್ಥಿತಿಗತಿಗಳನ್ನು ಜನತೆಗೆ ತಲುಪಿಸುವ ಹೊಣೆ ಹೊತ್ತಿದೆ ಎಂದು ಅವರು ಹೇಳಿದರು.

ಸುದ್ದಿ ಸಂಗ್ರಹ ಮತ್ತು ಪ್ರಸಾರದ ವೇಳೆ ಅನೇಕ ಬಾರಿ ಪತ್ರಕರ್ತರು ತಮ್ಮ ಜೀವದ ಹಂಗನ್ನೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೂ ಕುಟುಂಬದ ಜವಾಬ್ದಾರಿಗಳಿವೆ ಎಂಬುದನ್ನು ಸರ್ಕಾರ ಮನಗಾಣಬೇಕು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪತ್ರಕರ್ತರು ಸಾಮಾಜಿಕ ನ್ಯಾಯ ಒದಗಿಸಬೇಕು. ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಶ್ರೀ ಮಾರುತಿ ಗುರೂಜಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಮಾಜಸೇವಕ ಗೋವಿಂದ ಪೂಜಾರಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸುವಲ್ಲಿ ಪತ್ರಕರ್ತರ ಪಾತ್ರ ಅನನ್ಯವಾಗಿದೆ. ಪತ್ರಕರ್ತರ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಟ್ರಸ್ಟ್ ಸ್ಥಾಪನೆ ಕುರಿತು ಚಿಂತನೆ ನಡೆಯುತ್ತಿದೆ ಎಂದರು.

ಹಿರಿಯ ವರದಿಗಾರ ಗಂಗಾಧರ್ ಮೊದಲಿಯರ್ ಮಾತನಾಡಿ, ಕೆಲವು ಕಡೆಗಳಲ್ಲಿ ಪತ್ರಕರ್ತರನ್ನು ಭಯೋತ್ಪಾದಕರಂತೆ ಕಾಣುವ ಮನೋಭಾವ ಕಂಡುಬರುತ್ತಿರುವುದು ದುಃಖಕರವಾಗಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಗಟ್ಟಿಯಾದ ನೆಲೆಯಲ್ಲಿ ನಿಂತು ತಮ್ಮ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ಮಾಧ್ಯಮ ಕ್ಷೇತ್ರದಲ್ಲಿ ತಾಂತ್ರಿಕ ಬದಲಾವಣೆಗಳು ವೇಗವಾಗಿ ನಡೆಯುತ್ತಿದ್ದು, ಅವಕ್ಕೆ ತಕ್ಕಂತೆ ಪತ್ರಿಕೋದ್ಯಮವೂ ಹೊಂದಿಕೊಳ್ಳಬೇಕಿದೆ. ಇಂತಹ ರಾಜ್ಯಮಟ್ಟದ ವಿಚಾರ ಸಂಕಿರಣಗಳು ಹಾಗೂ ಪ್ರಶಸ್ತಿ ಸಮಾರಂಭಗಳು ಹೊಸ ಪತ್ರಕರ್ತರಿಗೆ ಪ್ರೇರಣೆಯಾಗುತ್ತವೆ ಎಂದು ಹೇಳಿದರು.

ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೇವಲ ಮೂರು ವರ್ಷಗಳಲ್ಲಿ ಸಂಘಟನೆ 26 ಜಿಲ್ಲೆಗಳಿಗೆ ವಿಸ್ತರಿಸಿದೆ. ಪತ್ರಕರ್ತರ ಮಾಸಾಶನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಮುಳುಗು ತಜ್ಞ ಈಶ್ವರ ಮಲ್ಪೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಶಿವಾನಂದ ನಾಯ್ಕ, ಖ್ಯಾತ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉದ್ಯಮಿ ಗೋವಿಂದ ಬಾಬು ಪೂಜಾರಿ, ಕಾನಿಪ ಧ್ವನಿ ಕರಾವಳಿ ಕರ್ನಾಟಕ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ನಾಗರಾಜ್ ದೈವಜ್ಞ, ಉಡುಪಿ ಜಿಲ್ಲಾಧ್ಯಕ್ಷ ದಾಮೋದರ ಮೊಗವೀರ ಸೇರಿದಂತೆ ಹಲವು ಗಣ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.