
ಡೈಲಿ ವಾರ್ತೆ: ಫೆ./03/2026
ಕೌಟುಂಬಿಕ ಕಲಹ: ಮಂಜೇಶ್ವರದಲ್ಲಿ ತಂದೆಯೇ ಮಗಳನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ!

ಮಂಜೇಶ್ವರ: ಕೌಟುಂಬಿಕ ಕಲಹದ ಬೆನ್ನಲ್ಲೇ ತಂದೆಯೇ ತನ್ನ 18 ವರ್ಷದ ಮಗಳನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ಸೋಮವಾರ ಸಂಜೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಹಿಲ್‌ಟಾಪ್ ನಗರದಲ್ಲಿ ನಡೆದಿದೆ.

ಮೃತ ಯುವತಿಯನ್ನು ಮರಿಯಮತ್ ಜುಮೈರಾ (18) ಎಂದು ಗುರುತಿಸಲಾಗಿದ್ದು, ಈ ಕೃತ್ಯ ಎಸಗಿದ ಆಕೆಯ ತಂದೆ ಉಮರ್ ಪಾಷ ಎಂಬಾತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ದಾಳಿಯ ವೇಳೆ ಅಡ್ಡ ಬಂದ ಜುಮೈರಾದ ದೊಡ್ಡಪ್ಪ ಶೇಕುಂಞ ಎಂಬವರಿಗೋ ಆರೋಪಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಆರೋಪಿ ಉಮರ್ ಪಾಷ ಮೂರು ತಿಂಗಳ ಹಿಂದಷ್ಟೇ ವಿದೇಶದಿಂದ ಊರಿಗೆ ಮರಳಿದ್ದನು. ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಪದೇಪದೇ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಸೋಮವಾರ ಸಂಜೆ ಕೂಡ ಮನೆಮಧ್ಯೆ ಜಗಳ ತಾರಕಕ್ಕೇರಿದ್ದು, ಆಕ್ರೋಶಗೊಂಡ ಉಮರ್ ತನ್ನ ಮಗಳ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ.
ಮಗಳ ಕಿರುಚಾಟ ಕೇಳಿ ತಡೆಯಲು ಬಂದ ದೊಡ್ಡಪ್ಪ ಶೇಕುಂಞ ಅವರಿಗೂ ಆರೋಪಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಮನೆಯಿಂದ ಕೇಳಿಬಂದ ಕಿರುಚಾಟದಿಂದ ಆತಂಕಗೊಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿದಾಗ ಜುಮೈರಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ನಡೆದರೂ, ಅಷ್ಟರಲ್ಲೇ ಆಕೆ ಮೃತಪಟ್ಟಿರುವುದು ದೃಢಪಟ್ಟಿದೆ. ಗಾಯಗೊಂಡ ದೊಡ್ಡಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಘಟನಾ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.