
ಡೈಲಿ ವಾರ್ತೆ: ಫೆ./03/2026
ಅಧಿಕಾರದ ಆಸೆಗೆ ಅಮಾನುಷ ಕೃತ್ಯ: ಚುನಾವಣೆಗೆ ಸ್ಪರ್ಧಿಸಲು 6 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಹತ್ಯೆಗೈದ ಪಾಪಿ ತಂದೆ!

ನಿಜಾಮಾಬಾದ್ (ತೆಲಂಗಾಣ):
ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ ಆರು ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಅಮಾನವೀಯ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕೊಲೆಯಾದ ಬಾಲಕಿಯನ್ನು ಪ್ರಾಚಿ (6) ಎಂದು ಗುರುತಿಸಲಾಗಿದ್ದು, ಹತ್ಯೆಗೈದ ಆರೋಪಿಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ.
ಆತ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿಯಾಗಿದ್ದಾನೆ.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಾಂಡುರಂಗ ತಯಾರಿ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.
ನಿಜಾಮಾಬಾದ್ ಪೊಲೀಸ್ ಆಯುಕ್ತ ಪಿ. ಸಾಯಿ ಚೈತನ್ಯ ಮಾಹಿತಿ ನೀಡಿದಂತೆ, ಕೆಲ ದಿನಗಳ ಹಿಂದೆ ಯೆಡಪಲ್ಲಿಯ ನಿಜಾಮ ಸಾಗರ್ ಕಾಲುವೆಯಲ್ಲಿ ಬಾಲಕಿಯ ಶವ ಪತ್ತೆಯಾಗಿತ್ತು.
ಪ್ರಕರಣದ ತನಿಖೆಯ ವೇಳೆ ಬಾಲಕಿಯ ತಂದೆಯಾದ ಪಾಂಡುರಂಗನನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಮಗಳು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಹೇಳಿ ಪೊಲೀಸರನ್ನು ದಾರಿ ತಪ್ಪಿಸಲು ಆತ ಪ್ರಯತ್ನಿಸಿದ್ದಾನೆ.
ಆದರೆ ತನಿಖಾಧಿಕಾರಿಗಳ ತೀವ್ರ ವಿಚಾರಣೆಯಲ್ಲಿ ಆತ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಗ್ರಾಮದಲ್ಲಿ ಸೆಲೂನ್ ನಡೆಸುತ್ತಿದ್ದ ಪಾಂಡುರಂಗನಿಗೆ ಮೂರು ವರ್ಷದ ಗಂಡು ಮಗು ಹಾಗೂ ಆರು ವರ್ಷದ ಅವಳಿ ಹೆಣ್ಣು ಮಕ್ಕಳು ಇದ್ದರು.
ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡು ಮಕ್ಕಳ ನಿಯಮ ಅನ್ವಯವಾಗುವುದರಿಂದ, ಆತ ಸ್ಪರ್ಧಿಸಲು ಅನರ್ಹನಾಗಿದ್ದ.
ಈ ಹಿನ್ನೆಲೆಯಲ್ಲಿ ತನ್ನ ಸ್ನೇಹಿತ ಹಾಗೂ ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆ ಜೊತೆ ಚರ್ಚಿಸಿ, ಅವಳಿ ಮಕ್ಕಳಲ್ಲಿ ಹಿರಿಯಳಾದ ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರುವ ಯೋಚನೆ ಮಾಡಿಕೊಂಡಿದ್ದಾನೆ. ಬಳಿಕ ಆಕೆ ವಾಪಸ್ ಬಂದರೆ ತೊಂದರೆಯಾಗಬಹುದು ಎಂಬ ಭೀತಿಯಿಂದ, ಕಾಲುವೆಗೆ ತಳ್ಳಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಜಾಮಾಬಾದ್ ಪೊಲೀಸರು ಆರೋಪಿ ಪಾಂಡುರಂಗ ಕೊಂಡ್ಮಂಗಳೆ ಹಾಗೂ ಸರಪಂಚ್ ಗಣೇಶ್ ಶಿಂಧೆಯನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.