ಡೈಲಿ ವಾರ್ತೆ: 17/DEC/2023
ವಿದ್ಯಾರ್ಥಿಗಳನ್ನ ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ: ಪ್ರಿನ್ಸಿಪಾಲ್, ವಾರ್ಡನ್, ಡಿ-ಗ್ರೂಪ್ ನೌಕರರ ಅಮಾನತಿಗೆ ಸೂಚನೆ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು ಯಲವಳ್ಳಿ ಗ್ರಾಮದ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರು, ಶಿಕ್ಷಕರ ಎದುರಲ್ಲೇ ವಿದ್ಯಾರ್ಥಿಗಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿರುವ ಘಟನೆ ನಡೆದಿದೆ. ಪ್ರಾಂಶುಪಾಲರ ಎದುರಲ್ಲೇ ಸಿಬ್ಬಂದಿ, ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ.
ಅಮಾನವೀಯ ಕೃತ್ಯದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲಿ ಸುಮಾರು 250 ಮಕ್ಕಳಿದ್ದಾರೆ. ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಪೋಷಕರು ಆಗ್ರಹಿಸಿದ್ದಾರೆ.
ಎಲ್ಲಾ ಮಕ್ಕಳೂ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎನ್ನಲಾಗಿದೆ. ಅದು ಮಲದ ಗುಂಡಿ ಅಲ್ಲ ಸ್ವಚ್ಛತಾ ಆಂದೋಲನದ ಭಾಗವಾಗಿ ಚೇಂಬರ್ ಒಳಗೆ ಇಳಿಸಿ ಸ್ವಚ್ಛಗೊಳಿಸಲಾಗಿದೆ ಎಂದು ಪ್ರಾಂಶುಪಾಲೆ ಭಾರತಮ್ಮ ಸಮಜಾಯಿಷಿ ನೀಡಿದ್ದಾರೆ. ಆದರೆ ಅದು ಮಲದ ಗುಂಡಿ ಎಂಬುದು ಶಿಕ್ಷಕರ ಮಾತು. ಚೇಂಬರ್ನೊಳಗಾದರೂ ನಮ್ಮ ಮಕ್ಕಳನ್ನು ಏಕೆ ಇಳಿಸಬೇಕು? ಎಂದು ಪೋಷಕರು ಪ್ರಶ್ನಿಸಿದ್ದಾರೆ.
ಈ ಅಮಾನವೀಯ ಘಟನೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹಾದೇವಪ್ಪ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ನನಗೂ ಬೆಳಗ್ಗೆ ವಿಷಯ ತಿಳಿಯಿತು. ಪ್ರಿನ್ಸಿಪಾಲ್ ಸೆಕ್ರೆಟರಿ ಮಣಿವಣ್ಣನ್ ಅವರೊಂದಿಗೆ ಮಾತನಾಡಿ, ಶಾಲೆಯ ಪ್ರಾಂಶುಪಾಲರು, ವಾರ್ಡನ್ ಹಾಗೂ ಡಿ.ಗ್ರೂಪ್ ನೌಕರ ಎಲ್ಲರನ್ನೂ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ಸಮಾಜ ಕಲ್ಯಾಣ ಇಲಾಖೆಯಿಂದ ಘಟನೆಯ ಕುರಿತು ಸಂಪೂರ್ಣ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಡಿ.ಗ್ರೂಪ್ ನೌಕರ ಮಾಡಿರುವ ಕೆಲಸ ಎಂದಿದ್ದಾರೆ. ಆದ್ರೆ ಪ್ರಾಂಶುಪಾಲರು ಹಾಗೂ ವಾರ್ಡನ್ ಸಹ ಇದಕ್ಕೆ ಜವಬ್ದಾರಿ. ಮಕ್ಕಳೇ ಆಗಲಿ, ಯಾರೇ ಆಗಲಿ ಇನ್ನೊಬ್ಬರ ಮಲ ಸ್ವಚ್ಛ ಮಾಡುವುದು ಸರಿಯಲ್ಲ. ಇದು ಅಕ್ಷಮ್ಯ ಅಪರಾಧ. ಇಲಾಖೆಯಿಂದ ಹೆಚ್ಚಿನ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.