ಡೈಲಿ ವಾರ್ತೆ: 25/DEC/2023

ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಸರಣಿ ಕಳ್ಳತನ ಸಿ.ಸಿ ಕ್ಯಾಮರಾಕ್ಕೆ ಕವಚ ಹಾಕಿ ನುಗ್ಗಿದ ಕಳ್ಳರು

ಬಂಟ್ವಾಳ : ಬಿ.ಸಿ.ರೋಡಿನ ಹೃದಯ ಭಾಗದಲ್ಲಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ಇರುವ ಹೋಟೆಲ್, ಮೆಡಿಕಲ್ ಹಾಗೂ ಅಂಗಡಿಗಳಿಗೆ ಕಳ್ಳರು ನುಗ್ಗಿದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಬಿ.ಸಿ.ರೋಡಿನ ಆನಿಯಾ ದರ್ಬಾರ್ ಹೋಟೆಲಿನ ಎರಡೆರಡು ಶಟರ್ ಬೇಧಿಸಿ ಒಳಗೆ ನುಗ್ಗಿದೆ ಕಳ್ಳರು ಕ್ಯಾಶ್ ಡ್ರಾಯರ್ ನಲ್ಲಿದ್ದ 70 ಸಾವಿರಕ್ಕೂ ಅಧಿಕ ಮೊತ್ತದ ನಗದು ಹಣವನ್ನು ಎಗರಿಸಿದ್ದಾರೆ.

ಮುಸುಕುಧಾರಿಯಾಗಿರುವ ಕಳ್ಳನೋರ್ವ ಹೋಟೆಲಿನ ಗೇಟಿನ ಬೀಗವನ್ನು ಬಲವಂತವಾಗಿ ತೆಗಯುವ ದೃಶ್ಯ ಸಿಸಿ ಟಿವಿಯಲ್ಲಿ ದೊರಕಿದ್ದು, ಉಳಿದಂತೆ ಒಳ ಪ್ರವೇಶಿಸುವ ಹಂತದಲ್ಲಿ ಸಿಸಿ ಕ್ಯಾಮರಾಕ್ಕೂ ಕವಚ ಹಾಕಿ ನುಗ್ಗಿದ್ದಾನೆ. ಹೋಟೆಲ್ ನ ಇನ್ನೊಂದು ಪಕ್ಕದಲ್ಲಿರುವ ಅಂಗಡಿ, ಮೇಲಂತಸ್ತಿನಲ್ಲಿರುವ ಮೆಡಿಕಲ್ ಗೂ ನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಇತ್ತೀಚೆಗೆ ಬಿ.ಸಿ.ರೋಡ್ ಸಮೀಪದ ಅಜ್ಜಿಬೆಟ್ಟುವಿನಲ್ಲಿ ಹಾಡು ಹಗಲೇ ನಡೆದ ಸರ ಕಳ್ಳತನವನ್ನು ಪೊಲೀಸರು ಯಶಸ್ವಿಯಾಗಿ ಬಗೆಹರಿಸಿ ನಿಟ್ಟುಸಿರು ಬಿಡುವಾಗಲೇ ಇನ್ನೊಂದು ಕಳವು ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಬಿ.ಸಿ.ರೋಡ್ ನ ಕೈಕಂಬ ಜಂಕ್ಷನ್ ನಲ್ಲಿ ಕಳ್ಳರು ಹಲವು ಅಂಗಡಿಗಳಿಗೆ ನುಗ್ಗಿ ಸರಣಿ ಕಳವು ನಡೆದ ಘಟನೆ ಹಚ್ಚ ಹಸಿರಾಗಿರುವಾಗಲೇ ಭಾನುವಾರ ಮಧ್ಯರಾತ್ರಿ ಬಿ.ಸಿ.ರೋಡ್ ನಲ್ಲಿರುವ ಮುಖ್ಯ ಪೇಟೆಯಲ್ಲೇ ಕಳವು ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.