ಡೈಲಿ ವಾರ್ತೆ: 25/DEC/2023
ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ನೂರಾರು ಜನ ಅಸ್ವಸ್ಥ – ಓರ್ವ ಮಹಿಳೆ ಸಾವು.!
ಬೆಂಗಳೂರು: ಹನುಮ ಜಯಂತಿ ಹಿನ್ನೆಲೆ ದೇವಾಲಯಗಳಲ್ಲಿ ಪ್ರಸಾದ ಸೇವಿಸಿ ನೂರಾರು ಜನ ಅಸ್ವಸ್ಥಗೊಂಡಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದಲ್ಲಿ ನಡೆದಿದೆ.
ಸಿದ್ದಗಂಗಮ್ಮ (65) ಸಾವನ್ನಪ್ಪಿದ ಮಹಿಳೆ ಎಂದು ತಿಳಿದುಬಂದಿದೆ. ಹನುಮ ಜಯಂತಿ ಅಂಗವಾಗಿ ಭಾನುವಾರ ಭಕ್ತರು ನಗರದ ವೆಂಕಟರಮಣಸ್ವಾಮಿ, ಊರುಬಾಗಿಲು ಆಂಜನೇಯ ಸ್ವಾಮಿ, ಕೋಟೆ ಆಂಜನೇಯ ಸ್ವಾಮಿ ದೇವಾಲಯಗಳಿಗೆ ತೆರಳಿದ್ದರು. ಅಲ್ಲಿ ಪುಳಿಯೊಗರೆ, ಪಾಯಸ ಹಾಗೂ ಲಡ್ಡನ್ನು ಪ್ರಸಾದದ ರೂಪದಲ್ಲಿ ನೆರೆದಿದ್ದ ಭಕ್ತರು ಸೇವಿಸಿದ್ದಾರೆ. ಪ್ರಸಾದ ಸೇವನೆ ಬಳಿಕ ಭಕ್ತರಿಗೆ ವಾಂತಿ ಹಾಗೂ ಭೇದಿ ಪ್ರಾರಂಭವಾಗಿದ್ದು, ನೂರಾರು ಜನ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡ ಭಕ್ತರನ್ನು ಹೊಸಕೋಟೆ ಖಾಸಗಿ ಆಸ್ಪತ್ರೆ, ಕೋಲಾರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಈ ಪ್ರಕರಣದಲ್ಲಿ ಹೊಸಕೋಟೆ ನಗರದ ಕಾವೇರಿ ನಗರ ನಿವಾಸಿ ಸಿದ್ದಗಂಗಮ್ಮ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಮಹಿಳೆ ಇಂದು ಬೆಳಗ್ಗೆ ವಾಂತಿ ಭೇದಿ ಎಂದು ಆಸ್ಪತ್ರೆಗೆ ದಾಖಲಾಗಿದ್ದು, ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ವತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ 15ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆಯ ಖಾಸಗಿ ಆಸ್ಪತ್ರೆಗಳಲ್ಲಿ ಮೂರು ಠಾಣಾ ವ್ಯಾಪ್ತಿಯ ಜನರು ದಾಖಲಾಗಿದ್ದಾರೆ. ಅವಲಹಳ್ಳಿ, ನಂದಗುಡಿ ಹಾಗೂ ಹೊಸಕೋಟೆ ಠಾಣಾ ವ್ಯಾಪ್ತಿಯ ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅಸ್ವಸ್ಥತೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೊಸಕೋಟೆ ಠಾಣೆ ಪೊಲೀಸರು ಸದ್ಯ ಅಸ್ವಸ್ಥಗೊಂಡವರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ತಾಲೂಕು ಆರೋಗ್ಯಾಧಿಕಾರಿಗಳಿಂದ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ಸದ್ಯ ಎಲ್ಲಾ ಖಾಸಗಿ ಆಸ್ಪತ್ರೆಗಳಿಂದ ಅಸ್ವಸ್ಥತೆಗೆ ಕಾರಣ ಏನು ಎಂಬ ಮಾಹಿತಿಯನ್ನು ತಾಲೂಕು ವೈದ್ಯಾಧಿಕಾರಿಗಳು ಪಡೆಯುತ್ತಿದ್ದಾರೆ.