ಡೈಲಿ ವಾರ್ತೆ: 26/DEC/2023
ದತ್ತಜಯಂತಿ ಸಂಭ್ರಮ: ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಕೊನೆ ದಿನವಾದ ಇಂದು ಪಾದುಕೆ ದರ್ಶನ ನಡೆಯಲಿದೆ.
ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾವಿರಾರು ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆ. ದತ್ತ ಗುಹೆ ಮುಂಭಾಗದ ತುಳಸಿ ಕಟ್ಟೆಯ ಬಳಿ ಹೋಮ-ಹವನ-ಪೂಜೆ ನಡೆಯುತ್ತಿದೆ.
ದತ್ತಜಯಂತಿ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ನಗರದ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳು ಬಂದ್ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳುವ ಮಾರ್ಗದಲ್ಲಿ ಅಂಗಡಿ ಮುಂಗಟ್ಟು ಸಂಪೂರ್ಣ ಬಂದ್ ಆಗಿದೆ.
ನಿನ್ನೆ ದತ್ತ ಜಯಂತಿಯ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಸಲಾಯ್ತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದ್ರು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಂಡಿತು.
ಶೋಭಾಯಾತ್ರೆಯಲ್ಲಿ 20 ರಿಂದ 25 ಸಾವಿರ ದತ್ತ ಭಕ್ತರು ಪಾಲ್ಗೊಂಡಿದ್ರು. ವೀರಭದ್ರ ವೇಷಧಾರಿಗಳ ಜೊತೆ ವೀರಗಾಸೆ ಕತ್ತಿ ಹಿಡಿದು ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು. ಮೂರು ಡಿಜೆ ಶಬ್ಧಕ್ಕೆ ಯುವಜನತೆ ಯುವಕ-ಯುವತಿಯರು ಎನ್ನದೆ ಎಲ್ಲರೂ ಒಂದೆಡೆ ಸೇರಿ ಮನಸ್ಸೋ ಇಚ್ಛೆ ಕುಣಿದು ಕುಪ್ಪಳಿಸಿದರು. ಈ ಮನಮೋಹಕ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಮಧ್ಯೆ ದತ್ತಪೀಠವನ್ನ ಹಿಂದೂಗಳಿಗೆ ವಹಿಸಿಕೊಡಬೇಕು ಎಂದು ಕೂಗಿ…ಕೂಗಿ ಹೇಳಿದ್ರು.