ಡೈಲಿ ವಾರ್ತೆ: 04/JAN/2024

ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು!

ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ಗೆ ಅನಾರೋಗ್ಯ ಉಂಟಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ವದಂತಿ ಹಬ್ಬಿದೆ.

ಬಿಗ್‌ಬಾಸ್‌ ಮನೆಯಲ್ಲಿ ಉತ್ತಮ ಸ್ಪರ್ಧಿ ಎಂದೆನಿಸಿಕೊಂಡಿರುವ ಡ್ರೋನ್ ಪ್ರತಾಪ್ ಕರುನಾಡಿನ ಜನಮನ ಗೆದ್ದಿರುವ ಸ್ಪರ್ಧಿ. ಕನ್ನಡ ಬಿಗ್‌ಬಾಸ್‌ನಲ್ಲಿ ಉತ್ತಮ ಆಟಗಾರರಾಗಿ ವಿಜೇತರಾಗಬೇಕು ಎನ್ನುವ ಕನಸು ಹೊಂದಿರುವ ಅವರನ್ನು ಬಿಗ್‌ಬಾಸ್‌ ಮನೆಯಲ್ಲಿ ದ್ವೇಷಿಸುವವರೂ ಇದ್ದಾರೆ.
ಅವರ ಮುಂದೆ ಏರು ಧ್ವನಿಯಲ್ಲಿ ಮಾತನಾಡುವುದು, ಅವರ ವಿರುದ್ಧ ದ್ವೇಷ ಕಾರುವುದು, ಪಿತೂರಿ ಮಾಡುವುದು ಎಲ್ಲವೂ ಬಿಗ್‌ಬಾಸ್‌ ಮನೆಯಲ್ಲಿ ನಡೆಯುತ್ತಿರುವುದನ್ನು ಜನ ನೋಡುತ್ತಿದ್ದಾರೆ. ಇತ್ತೀಚೆಗೆ ವರ್ಷಗಳಿಂದು ಅವರೊಂದಿಗೆ ಮಾತು ಬಿಟ್ಟಿದ್ದ ತಂದೆ ಮರಿಮಾದಯ್ಯ ಅವರು ಬಿಗ್‌ಬಾಸ್‌ ಮನೆಗೆ ಹೋಗಿ ಮಗನನ್ನು ಅಪ್ಪಿಕೊಂಡು ಸಾಂತ್ವಾನ ಹೇಳಿದ್ದರು. ಮಾತ್ರವಲ್ಲದೆ ಅವರ ತಾಯಿ ಕೂಡ ಅವರಿಗೆ ಇಷ್ಟವಾದ ಮುದ್ದೆಯನ್ನು ತಯಾರಿಸಿಕೊಂಡು ಹೋಗಿದ್ದರು.
ಆದರೀಗ ಪ್ರತಾಪ್ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ದಿನ ವಿಶ್ರಾಂತಿ ಪಡೆಯುವಂತೆಯೂ ಅವರಿಗೆ ವೈದ್ಯರು ತಿಳಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುವ ಗುಮಾನಿ ಹರಡಿದೆ. ಇದಕ್ಕೆ ಕೆಲವರು ಡ್ರೋನ್ ಪ್ರತಾಪ್‌ಗೆ ಆರೋಗ್ಯದಲ್ಲಿ ಏರುಪೇರಾಗಲು ಮನೆಯ ಇನ್ನಿತರ ಸದಸ್ಯರೇ ಕಾರಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಬಿಗ್‌ಬಾಸ್‌ ಮೂಲಗಳು ಇದನ್ನು ನಿರಾಕರಿಸಿವೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರತಾಪ್ ತಂದೆ ಮರಿಮಾದಯ್ಯ, ‘ಮಗನಿಗೆ ಫುಡ್ ಪಾಯಿಸನ್ ಆಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ರಾಂತಿ ಬಳಿಕ ಮತ್ತೆ ಬಿಗ್‌ಬಾಸ್ ಮನೆಗೆ ವಾಪಾಸ್‌ ಹೋಗುತ್ತಾರೆ’ ಎಂದು ತಿಳಿಸಿದ್ದಾರೆ.