ಡೈಲಿ ವಾರ್ತೆ: 04/JAN/2024
ಯೋಗಿ ಆದಿತ್ಯನಾಥ್ ಗೆ ಬಾಂಬ್ ಬೆದರಿಕೆ: ಇಬ್ಬರ ಬಂಧನ
ಲಕ್ನೋ: ಉದ್ಘಾಟನೆಗೆ ಸಿದ್ಧವಾಗಿರುವ ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವ ಹಾಗೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಬಾಂಬ್ ದಾಳಿ ಮೂಲಕ ಹತ್ಯೆಗೈಯುವ ಬೆದರಿಕೆಯ ಇ-ಮೇಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ತಂಡವು ಬುಧವಾರ ರಾತ್ರಿ(ಜ.3 ರಂದು) ಇಬ್ಬರು ಆರೋಪಿಗಳನ್ನು ಬಂಧಿಸಿರುವುದಾಗಿ ವರದಿಯಾಗಿದೆ.
ಗೊಂಡಾ ಮೂಲದ ತಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಲಾದ ಎರಡು ಮೊಬೈಲ್, ಮೇಲ್ ಐಡಿ, ಎರಡು ವೈ-ಫೈ ರೂಟರ್ ಮತ್ತು ಸಿಸಿಟಿವಿ ಡಿವಿಆರ್ ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಘಟನೆ ವಿವರ?: ಕೆಲ ಸಮಯದ ಹಿಂದೆ ಭಾರತೀಯ ಕಿಸಾನ್ ಮಂಚ್‌ನ ರಾಷ್ಟ್ರೀಯ ಅಧ್ಯಕ್ಷ ದೇವೇಂದ್ರ ತಿವಾರಿ ಅವರಿಗೆ ಬೆದರಿಕೆ ಮೇಲ್ ಬಂದಿತ್ತು. ಇದರಲ್ಲಿ ಎಸ್‌ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಅಮಿತಾಭ್ ಯಶ್ ಹಾಗೂ ರಾಮ ಮಂದಿರ, ಯೋಗಿ ಆದಿತ್ಯನಾಥ್ ಅವರಿಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿತ್ತು. ‘@iDevendraOffice’ ಟ್ವಿಟರ್ ಖಾತೆಯ ಪೋಸ್ಟ್ ನಲ್ಲಿ ಬೆದರಿಕೆ ಹಾಕಿದ್ದರು.
ಬೆದರಿಕೆ ಪೋಸ್ಟ್‌ಗಳನ್ನು ಕಳುಹಿಸಲು ‘[email protected]’ ಮತ್ತು ‘[email protected]’ ಇಮೇಲ್ ಐಡಿಗಳನ್ನು ಬಳಸಲಾಗಿದೆ ಎಂದು ಆರಂಭಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಎಸ್‌ಟಿಎಫ್ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಶ್ ಕುಮಾರ್ ಶುಕ್ಲಾ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಲ್ಲಿ ತಹರ್ ಸಿಂಗ್ ಇಮೇಲ್ ಖಾತೆಗಳನ್ನು ರಚಿಸಿದ್ದು, ಓಂ ಪ್ರಕಾಶ್ ಇಮೇಲ್ ಕಳುಹಿಸಿದ್ದರು. ಇಬ್ಬರು ತಿವಾರಿ ಅವರ ಅರೆವೈದ್ಯಕೀಯ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಭಾರತೀಯ ಕಿಸಾನ್ ಮಂಚ್ ಮತ್ತು ಭಾರತೀಯ ಗೌ ಸೇವಾ ಪರಿಷತ್ ಎಂಬ ಹೆಸರಿನಲ್ಲಿ ಎನ್‌ಜಿಒಗಳನ್ನು ನಡೆಸುತ್ತಿರುವ ದೇವೇಂದ್ರ ತಿವಾರಿ ಅವರ ಸೂಚನೆಯ ಮೇರೆಗೆ ನಾವು ನಕಲಿ ಐಡಿಗಳನ್ನು ಬಳಸಿ ಬೆದರಿಕೆಯ ಇಮೇಲ್ ಗಳನ್ನು ಕಳುಹಿಸುವ ಕೆಲಸವನ್ನು ಮಾಡುತ್ತಿದ್ದೆವು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಮಾಧ್ಯಮದ ಗಮನ ಮತ್ತು ರಾಜಕೀಯವಾಗಿ ಬೆಳೆಯಲು ಎಕ್ಸ್ ಖಾತೆಯ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಅವರು ಈ ರೀತಿ ಮಾಡುತ್ತಿದ್ದರು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇಮೇಲ್‌ಗಳನ್ನು ಕಳುಹಿಸಿದ ನಂತರ, ತಿವಾರಿ ಅವರ ಆದೇಶದ ಮೇರೆಗೆ ಬಳಸಿದ ಮೊಬೈಲ್ ಫೋನ್‌ಗಳನ್ನು ನಾಶಪಡಿಸಲು ಹೇಳಿದ್ದರು.ಕೃತ್ಯಕ್ಕೆ ಇಂಟರ್ನೆಟ್ ಕ್ಕಾಗಿ ಕಚೇರಿ ವೈ-ಫೈ ನ್ನು ಬಳಸಲಾಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.