ಡೈಲಿ ವಾರ್ತೆ: 10/Jan/2024

ಪುತ್ರನ ಹತ್ಯೆಗೈದ ಬೆಂಗ್ಳೂರು CEO ಪ್ರಕರಣ- ತಂದೆಯಿಂದ ಮಗುವಿನ ಅಂತ್ಯಸಂಸ್ಕಾರ

ಬೆಂಗಳೂರು: ಗೋವಾದಲ್ಲಿ ತಾಯಿಯಿಂದ ಹತ್ಯೆಯಾಗಿದ್ದ ಮಗುವಿನ ಅಂತ್ಯಸಂಸ್ಕಾರವನ್ನು ತಂದೆ ವೆಂಕಟರಮಣ ಹಾಗೂ ಕುಟುಂಬಸ್ಥರು ಹರಿಶ್ಚಂದ್ರಘಾಟ್‍ನಲ್ಲಿ ನೆರವೇರಿಸಿದ್ದಾರೆ.

ಕಂಪನಿಯೊಂದರ ಸಿಇಓ ಸುಚನಾ ಸೇಠ್ ತನ್ನದೇ ಮಗುವನ್ನು ಗೋವಾದ ಹೋಟೆಲ್‍ನಲ್ಲಿ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಚಿತ್ರದುರ್ಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಬಳಿಕ ಹಿರಿಯೂರಿನ ತಾಲೂಕು ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ನಂತರ ಐಮಂಗಲ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ಮಗುವಿನ ಮೃತದೇಹ ಮಧ್ಯರಾತ್ರಿ 1:45ಕ್ಕೆ ರವಾನಿಸಲಾಗಿತ್ತು. ಯಶವಂತಪುರ ಬಳಿ ಇರುವ ಬ್ರಿಗೇಡ್ ಗೇಟ್‍ವೇ ರೆಸಿಡೆನ್ಸಿಯಲ್ಲಿರುವ ನಿವಾಸದಿಂದ ಇದೀಗ ಹರಿಶ್ಚಂದ್ರ ಘಾಟ್‍ಗೆ ಮೃತದೇಹ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಸುಚನಾ ಸೇಠ್ ಗೋವಾದ ಹೋಟೆಲ್ ಒಂದರಲ್ಲಿ ತನ್ನ ಮಗುವನ್ನು ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ತರುವಾಗ ಹೊಟೇಲ್ ಸಿಬ್ಬಂದಿ ಹಾಗೂ ಕಾರು ಚಾಲಕನ ಸಮಯ ಪ್ರಜ್ಞೆಯಿಂದ ಚಿತ್ರದುರ್ಗ ಪೊಲೀಸರಿಗೆ ಒಪ್ಪಿಸಲಾಗಿತ್ತು. ಮಹಿಳೆಯ ಸೂಟ್‍ಕೇಸ್ ಪರಿಶೀಲಿಸಿದಾಗ ಮಗುವಿನ ಮೃತದೇಹ ಪತ್ತೆಯಾಗಿತ್ತು. ಬಳಿಕ ಪೊಲೀಸರು ಆಕೆಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಿದ್ದರು.

ಘಟನೆ ವಿವರ: ಸ್ವಂತ ಮಗುವನ್ನೇ ಸ್ಟಾರ್ಟ್ ಅಪ್ ಫೌಂಡರ್ ಮತ್ತು ಸಿಇಓ ಸುಚನಾ ಸೇಠ್ ಹತ್ಯೆಗೈದು ಸೂಟ್‍ಕೇಸ್‍ನಲ್ಲಿ ಶವ ತುಂಬಿಕೊಂಡು ಗೋವಾದಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಚಿತ್ರದುರ್ಗ ಪೊಲೀಸರು ಬಂಧಿಸಿದ್ದರು. ಸುಚನಾ ಸೇಠ್ ಶನಿವಾರ ತನ್ನ ಮಗನೊಂದಿಗೆ ಉತ್ತರ ಗೋವಾದ ಕ್ಯಾಂಡೋಲಿಮ್‍ನಲ್ಲಿರುವ ಸೋಲ್ ಬನಿಯನ್ ಗ್ರಾಂಡೆಗೆ ಭೇಟಿ ನೀಡಿದ್ದಳು. ಸೋಮವಾರ ಹೋಟೆಲ್ ತೊರೆಯುವಾಗ ಒಬ್ಬಂಟಿಯಾಗಿದ್ದು, ತಾನು ಬೆಂಗಳೂರಿಗೆ ಟ್ಯಾಕ್ಸಿ ಕಾಯ್ದಿರಿಸುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದಾಳೆ. ಅವರು ವಿಮಾನ ಸೌಲಭ್ಯ ಇರುವ ಸಲಹೆ ನೀಡಿದರೂ ಟ್ಯಾಕ್ಸಿ ತೆಗೆದುಕೊಳ್ಳುವಂತೆ ಆಕೆ ಒತ್ತಾಯಿಸಿದ್ದಾಳೆ ಎಂದು ಸಿಬ್ಬಂದಿ ತಿಳಿಸಿದ್ದರು.

ಆಕೆ ಹೋಟೆಲ್‍ನಿಂದ ಹೊರಗೆ ಹೋದ ಬಳಿಕ ಮಗು ಇಲ್ಲದಿದ್ದನ್ನು ಸಿಬ್ಬಂದಿ ಗಮನಿಸಿದ್ದರು. ಅಲ್ಲದೇ ಆಕೆ ತಂಗಿದ್ದ ಹೋಟೆಲ್ ಶುಚಿಗೊಳಿಸಲು ಹೋದಾಗ ರಕ್ತದ ಕಲೆಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಗೋವಾ ಪೊಲೀಸರು ಹೋಟೆಲ್ ಸಿಬ್ಬಂದಿ ಕರೆಸಿದ್ದ ಟ್ಯಾಕ್ಸಿ ಡ್ರೈವರ್ ಸಂಪರ್ಕಿಸಿ ಆಕೆಯೊಂದಿಗೆ ಮಾತನಾಡಲು ಹೇಳಿದ್ದಾರೆ. ಆಕೆಯ ಮಗನ ಬಗ್ಗೆ ಕೇಳಿದಾಗ ಅವನು ಸ್ನೇಹಿತನೊಂದಿಗೆ ಇರುವುದಾಗಿ ಹೇಳಿಕೊಂಡಿದ್ದಳು. ಆತನ ವಿಳಾಸವನ್ನೂ ನೀಡಿದ್ದಳು. ಪೊಲೀಸರು ಆ ವಿಳಾಸವನ್ನ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ನಂತರ ಟ್ಯಾಕ್ಸಿ ಡ್ರೈವರ್‌ಗೆ ಹೈವೇ ಬಳಿ ಪೊಲೀಸರು ಕಂಡಾಕ್ಷಣ ಟ್ಯಾಕ್ಸಿ ನಿಲ್ಲಿಸುವಂತೆ ತಿಳಿಸಿದ್ದಾಳೆ.

ನಂತರ ಟ್ಯಾಕ್ಸಿ ಚಾಲಕ ರಾಷ್ಟ್ರೀಯ ಹೆದ್ದಾರಿ-4ರ ಬಳಿಯ ಐಮಂಗಲ ಠಾಣೆ ಪೊಲೀಸರಿಗೆ ಆಕೆಯನ್ನ ಒಪ್ಪಿಸಿದ್ದ. ಬಳಿಕ ಟ್ಯಾಕ್ಸಿ ತಪಾಸಣೆ ಮಾಡಿದ ಐಮಂಗಲ ಪೊಲೀಸರಿಗೆ ಟ್ಯಾಕ್ಸಿ ಡಿಕ್ಕಿಯಲ್ಲಿದ್ದ ಸೂಟ್‍ಕೇಸ್‍ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಸಂಬಂಧ ಗೋವಾ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಕೌಟುಂಬಿಕ ಕಲಹದ ಹಿನ್ನೆಲೆ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆವಾಗಿನಿಂದಲೂ ಗಂಡ-ಹೆಂಡತಿ ಅನ್ಯೋನ್ಯವಾಗಿರಲಿಲ್ಲ. ಬಳಿಕ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿಕೊಂಡಿದ್ದರು. ವಾರಕ್ಕೊಮ್ಮೆ ವೆಂಕಟರಮಣ ಅವರಿಗೆ ಮಗುವನ್ನು ತೋರಿಸುವಂತೆ ನ್ಯಾಯಾಲಯ ಈ ವೇಳೆ ಹೇಳಿತ್ತು. ಮಗುವನ್ನು ತೋರಿಸಲು ಇಷ್ಟವಿಲ್ಲದೇ ಹತ್ಯೆಗೈದಿರುವುದು ವಿಚಾರಣೆಯ ವೇಳೆ ಬಯದಲಾಗಿದೆ.