ಡೈಲಿ ವಾರ್ತೆ: 10/Jan/2024
ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
ಲಕ್ನೋ: ರಾಮಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಯೋಧ್ಯೆಗೆ ಸಾಕಷ್ಟು ಕೊಡುಗೆಗಳು ಬಂದಿವೆ. ಅವುಗಳಲ್ಲಿ ದೇಶದ ಅತೀ ಗೊಡ್ಡ ಘಂಟೆಯೂ ಸೇರಿದೆ.
ಹೌದು. 2,400 ಕೆ.ಜಿ ತೂಕದ ಬೃಹತ್ ಘಂಟೆ ಎಟಾಹ್ ಜಿಲ್ಲೆಯ ಜಲೇಸರ್ ಪಟ್ಟಣದಿಂದ ಈಗಾಗಲೇ ಅಯೋಧ್ಯೆ ತಲುಪಿದೆ. ಜಿಲ್ಲೆಯ ಉಪವಿಭಾಗಗಳಲ್ಲಿ ವಾಹನದ ಮೇಲೆ ಈ ಬೃಹತ್ ಘಂಟೆಯನ್ನು ಪ್ರದರ್ಶಿಸಿದ ನಂತರ ರೈಲಿನ ಮೂಲಕ ಸಾಗಿಸಲಾಗಿದ್ದು, ಮಂಗಳವಾರ ಅಯೋಧ್ಯೆಗೆ ತಲುಪಿದೆ.
ಸುಮಾರು 30 ಕಾರ್ಮಿಕರ ತಂಡದಿಂದ ಈ ಘಂಟೆ ತಯಾರಾಗಿದೆ. ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ತವರ, ಕಬ್ಬಿಣ ಮತ್ತು ಪಾದರಸ ಹೀಗೆ ಒಟ್ಟು 8 ಲೋಹಗಳಿಂದ ತಯಾರಿಸಲಾಗಿದೆ. ಘಂಟೆಯ ಅಗಲ 15 ಅಡಿ ಮತ್ತು ಒಳಭಾಗದ ಅಗಲ 5 ಅಡಿ ಇದ್ದು, ಇದನ್ನು ತಯಾರಿಸಲು ಒಂದು ವರ್ಷ ಬೇಕಾಗಿದೆ.
ಲೋಹದ ಉದ್ಯಮಿ ಆದಿತ್ಯ ಮಿತ್ತಲ್ ಮಾತನಾಡಿ, ಸಹೋದರನಾಗಿದ್ದ ಜಲೇಸರ್ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿಕಾಸ್ ಮಿತ್ತಲ್ ಅವರು ಈಗ ನಮ್ಮೊಂದಿಗಿಲ್ಲ. ಅವರು ದೇವಾಲಯಕ್ಕೆ ಘಂಟೆಯನ್ನು ಕೊಡುಗೆಯಾಗಿ ನೀಡಲು ಬಯಸಿದ್ದರು. ಅದರಂತೆ ನಮ್ಮಿಂದ ಈ ಕೊಡುಗೆಯನ್ನು ಅಯೋಧ್ಯೆಗೆ ನೀಡಲಾಗಿದೆ. ಎಂದರು.