ಡೈಲಿ ವಾರ್ತೆ: 14/Jan/2024
ದ್ವೇಷ ಭಾಷಣ ಹಾಗೂ ಅಶಾಂತಿ ಮೂಡಿಸಲು ಯತ್ನ: ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲು
ಕಾರವಾರ: ಉತ್ತರಕನ್ನಡ ಜಿಲ್ಲಾ ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದ್ವೇಷ ಭಾಷಣ ಹಾಗೂ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನ ಮಾಡಿರುವುದಾಗಿ ಸಂಸದರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಹಾಗೂ 153 (ಗಲಭೆಗೆ ಪ್ರಚೋದನೆ) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಬರಿ ಮಸೀದಿಯಂತೆ ದೇವಸ್ಥಾನಗಳ ಕುರುಹು ಇರುವ ಇತರ ಮಸೀದಿಗಳನ್ನು ಒಡೆಯುವುದಾಗಿ ಸಂಸದರು ಸುಳಿವು ನೀಡಿದ್ದರು. ಜೊತೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನ ಹಾಗೂ ಟೀಕಾಸ್ತ್ರ ಪ್ರಯೋಗಿಸಿದ್ದರು. ಅಲ್ಲದೇ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಸಂತರ ಶಾಪವಿತ್ತು ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆಗಳನ್ನು ಸಂಸದರು ನೀಡಿದ ಬಳಿಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೂಡಾ ಪ್ರಕರಣ ದಾಖಲಿಸಲು ಸಾಕಷ್ಟು ಒತ್ತಡ ಹಾಕಿದ್ದರು. ಅಲ್ಲದೇ ಸಂಸದರ ಹೇಳಿಕೆ ಮಾಧ್ಯಮಗಳಲ್ಲಿಯೂ ಪ್ರಸಾರವಾದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಹೆಗಡೆ ಹೇಳಿದ್ದೇನು..?: ಶಿರಸಿಯ ಸಿಪಿ ಬಜಾರ್ ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದು ಕೆಂಡ ಕಾರಿದ್ದರು.
ಇಂದಿಗೂ ಮೂರ್ಖ ರಾಮಯ್ಯನಂಥವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ. ಶತಮಾನಗಳು ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು. ಮತ್ತೆ ನಾವೇ ಪ್ರಯತ್ನಿಸಿದರೂ ಸಮಾಜ ಒಡೆಯದಂತೆ ಸದೃಢಗೊಳಿಸಬೇಕು ಎಂದು ಕರೆ ನೀಡಿದ್ದರು.
ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ, ಅವರು ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಆದ್ರೆ ಸಿದ್ದರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ವೋಟಿಗೆ ಹರಾಜಾಗಿ ಹೋದವರು ನಮ್ಮ ವಿರೋಧಿಗಳು ಎಂದು ಅಸಮಾಧಾನ ಹೊರಹಾಕಿದ್ದರು.