

ಡೈಲಿ ವಾರ್ತೆ: ಫೆ./03/2026


ಸಾಗರ ಮಾರಿಕಾಂಬ ದೇವಿ ಜಾತ್ರೆಯಲ್ಲಿ ಕುಸಿದು ಬಿದ್ದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ; ಆಸ್ಪತ್ರೆಗೆ ದಾಖಲು

ಸಾಗರ: ಇಂದಿನಿಂದ ಆರಂಭಗೊಂಡಿರುವ ಪ್ರಸಿದ್ಧ ಸಾಗರ ಮಾರಿಕಾಂಬ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ಆಗಮಿಸಿದ್ದ ರಾಜ್ಯ ರಾಜಕಾರಣದ ಹಿರಿಯ ಮುತ್ಸದ್ದಿ ಕಾಗೋಡು ತಿಮ್ಮಪ್ಪ ಅವರು ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ಮಂಗಳವಾರ ಸಂಭವಿಸಿದೆ.
ದೇವಾಲಯದಲ್ಲಿ ತೀವ್ರ ಜನಸಂದಣಿ ಇದ್ದ ಕಾರಣ ಉಸಿರಾಟದ ತೊಂದರೆ ಉಂಟಾಗಿದ್ದು, ಜೊತೆಗೆ ಮಧುಮೇಹ ಸಮಸ್ಯೆಯೂ ಹೆಚ್ಚಾಗಿ ಅಸ್ವಸ್ಥರಾದ ಕಾಗೋಡು ತಿಮ್ಮಪ್ಪ ಅವರನ್ನು ತಕ್ಷಣವೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಉಪವಿಭಾಗೀಯ ಆಸ್ಪತ್ರೆಯ ವೈದ್ಯ ವಿಕ್ರಂ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಮಯೋಚಿತ ಚಿಕಿತ್ಸೆಯಿಂದಾಗಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಪ್ರಸ್ತುತ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.