ಡೈಲಿ ವಾರ್ತೆ: 21/Jan/2024
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಓರ್ವ ಪೂಜಾ ವಸ್ತು ಅಲ್ಲ, ಅವರೊಬ್ಬ ಪ್ರೇರಣಾ ಶಕ್ತಿ ; ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ.ಮಹಾದೇವಪ್ಪ
ಬಂಟ್ವಾಳ : ಭಾರತದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಓರ್ವ ಪೂಜಾ ವಸ್ತು ಅಲ್ಲ, ಅವರೊಬ್ಬ ಪ್ರೇರಣಾ ಶಕ್ತಿಯಾಗಿದ್ದು ಅವರ ಆದರ್ಶವನ್ನು ನಾವು ಪಾಲಿಸಬೇಕಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ| ಎಚ್.ಸಿ.ಮಹಾದೇವಪ್ಪ ಹೇಳಿದರು.
ಬಂಟ್ವಾಳ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದೊಂದಿಗೆ ಬಿ.ಸಿ.ರೋಡಿನಲ್ಲಿ ನಿರ್ಮಾಣ ಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು
ಧರ್ಮ, ಜಾತಿಯ ಹೆಸರಿನಲ್ಲಿ ಜನರನ್ನು ದಾರಿ ದಾರಿ ತಪ್ಪಿಸುವ ಕೆಲಸ ದೇಶದಲ್ಲಿ ನಡೆಯುತ್ತಿದೆ, ಕೋಮು ದ್ವೇಷವನ್ನು ಹುಟ್ಟು ಹಾಕುವ ಮೂಲಕ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ, ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರವಾಗಿದೆ. 140 ಕೋಟಿ ಜನರ ಭವಿಷ್ಯ ಇಲ್ಲಿನ ಸಂವಿಧಾನದಲ್ಲಿ ಅಡಕವಾಗಿದೆ ಎಲ್ಲರೂ ಸೇರಿ ಸಂವಿಧಾನದ ರಕ್ಷಣೆ ಮಾಡಿದಾಗ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ ಎಂದ ಅವರು ನಾನು ಸಚಿವನಾದ ಮೇಲೆ ಸಂವಿಧಾನದ ಪೀಠಿಕೆಯನ್ನು ಶಾಲೆಗಳಲ್ಲಿ ಓದಿ ಅರ್ಥೈಸಲು ಅವಕಾಶ ಕಲ್ಪಿಸಲಾಗಿದೆ.
ಮಹಿಳೆಯರ, ದಲಿತರ , ಹಿಂದುಳಿದ ವರ್ಗದ ಜನರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಚಿಂತನೆ ಮಾಡಿ ಅನೇಕ ಯೋಜನೆಗಳನ್ನು ರೂಪಿಸಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಎಲ್ಲಾ ಸರಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತಂದಾಗ ಭವನಕ್ಕೆ ಬೇಕಾದ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಆಗುತ್ತದೆ ಈ ನಿಟ್ಟಿನಲ್ಲಿ ಸಚಿವರು ಸಹಕರಿಸಬೇಕು ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ, ಮಾತನಾಡಿ, ಸಿದ್ದರಾಮಯ್ಯ ಅವರ ಕಳೆದ ಸರಕಾರದ ಅವಧಿಯಲ್ಲಿ ಬಂಟ್ವಾಳ ತಾಲೂಕಿನ ಸಿ.ಆರ್.ಎಫ್ ಮತ್ತು ಜಿಲ್ಲಾ ಪಂಚಾಯತ್ ರಸ್ತೆಗಳ ಅಭಿವೃದ್ಧಿ, ಬಂಟ್ವಾಳ ಪ್ರವಾಸಿ ಮಂದಿರ ನಿರ್ಮಾಣದಲ್ಲಿ ಮಹದೇವಪ್ಪ ಅವರ ಕೊಡುಗೆ ಅಪಾರವಾಗಿತ್ತು. ಕಡೇಶಿವಾಲಯ ಮತ್ತು ಅಜಿಲಮೊಗರು ಸಂಪರ್ಕ ಸೇತುವೆ ಪೂರ್ಣಗೊಳ್ಳಲು ಸಚಿವ ಮಹದೇವಪ್ಪ ಅವರು ಸಹಕಾರ ನೀಡುವಂತೆ ಮನವಿ ಮಾಡಿದರು.
ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆನಂದ, ಮಾಜಿ ಸಚಿವ ವಿನಯಕುಮಾರ್ ಸೊರಕೆ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಮಾಲತಿ, ಇಲಾಖೆಯ ಅಧಿಕಾರಿಗಳಾದ ಅನಿತಾ, ಸಿ.ಕೆ.ಮಂಜುಳಾ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಸಚಿವ ಮಹಾದೇವಪ್ಪ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಸಭಾ ಭವನ ತನಕ ಮೆರವಣಿಗೆ ಜಾಥ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ ಸ್ವಾಗತಿಸಿದರು. ಸುಜಾತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.