ಡೈಲಿ ವಾರ್ತೆ: 22/Jan/2024

ಬಿಲ್ಕಿಸ್ ಬಾನು ಪ್ರಕರಣದ 11 ಮಂದಿ ಅಪರಾಧಿಗಳು ಭಾನುವಾರ ತಡರಾತ್ರಿ ಗೋದ್ರಾ ಉಪ ಜೈಲಿಗೆ ಶರಣು

ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಎಲ್ಲಾ 11 ಮಂದಿ ಅಪರಾಧಿಗಳು ಸುಪ್ರೀಂ ಕೋರ್ಟ್ ವಿಧಿಸಿದ ಗಡುವನ್ನು ಅನುಸರಿಸಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾ ಉಪ ಜೈಲಿಗೆ ಭಾನುವಾರ ತಡರಾತ್ರಿ ಶರಣಾಗಿದ್ದಾರೆ.

ಅವರು ಜನವರಿ 21ರ ಮಧ್ಯರಾತ್ರಿಯ ಮೊದಲು ಜೈಲು ತಲುಪಿದ್ದಾರೆ, ಅದು ಅವರಿಗೆ ಶರಣಾಗಲು ನಿಗದಿಪಡಿಸಿದ ಗಡುವು ಎಂದು ಸ್ಥಳೀಯ ಕ್ರೈಂ ಬ್ರಾಂಚ್ ಇನ್ಸ್‌ಪೆಕ್ಟರ್ ಎನ್‌ಎಲ್ ದೇಸಾಯಿ ಅವರನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.

ಒಟ್ಟು 11ಮಂದಿ ಅತ್ಯಾಚಾರಿಗಳ ಪೈಕಿ ಮೂವರು ಶರಣಾಗತಿ ಅವಧಿ ವಿಸ್ತರಿಸುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಕಳೆದ ಶುಕ್ರವಾರ ಅವರ ಮನವಿಯನ್ನು ತಿರಸ್ಕರಿಸಿದ ಕೋರ್ಟ್‌, ಜನವರಿ 8 ರಂದು ನೀಡಿದ್ದ ತೀರ್ಪಿನಂತೆ ಜನವರಿ 21ರಂದು ಎಲ್ಲಾ 11 ಅಪರಾಧಿಗಳು ಜೈಲಿಗೆ ಮರಳಬೇಕು ಎಂದಿತ್ತು. ಅದರಂತೆ ಎಲ್ಲರೂ ಜೈಲಿಗೆ ಮರಳಿದ್ದಾರೆ.
ಈ ಅತ್ಯಾಚಾರಿಗಳ ಪೈಕಿ ಪ್ರಮುಖರಾದ ಗೋವಿಂದಭಾಯಿ ನಾಯ್, ರಮೇಶ್ ರೂಪಾಭಾಯ್ ಚಂದನ್ ಮತ್ತು ಮಿತೇಶ್ ಚಿಮನ್ಲಾಲ್ ಭಟ್ ಮಕ್ಕಳ ಮದುವೆ, ಅನಾರೋಗ್ಯ, ಚಳಿಗಾಲದ ಕೊಯ್ಲು ಇತ್ಯಾದಿ ಕಾರಣಗಳನ್ನು ನೀಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶರಣಾಗಲು 6 ವಾರಗಳ ಹೆಚ್ಚುವರಿ ಸಮಯ ನೀಡುವಂತೆ ಕೋರಿದ್ದರು.

2002ರ ಗುಜರಾತ್‌ನ ಗೋದ್ರಾ ಗಲಭೆ ಸಂದರ್ಭದಲ್ಲಿ ಈ ಹನ್ನೊಂದು ಮಂದಿ ಕ್ರೂರಿಗಳು ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಆಕೆಯ ಮೂರು ವರ್ಷದ ಮಗಳು ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ
ಮರಣದಂಡನೆಗೆ ಒಳಗಾಗಿದ್ದ ಹನ್ನೊಂದು ಮಂದಿಯ
ಶಿಕ್ಷೆಯನ್ನು ಜೀವಾವಧಿಗೆ ಇಳಿಕೆ ಮಾಡಲಾಗಿತ್ತು. ಆದರೆ
ಶಿಕ್ಷೆ ಅವಧಿ ಮುಗಿಯುವುದಕ್ಕೂ ಮುನ್ನವೇ ಗುಜರಾತ್
ಸರ್ಕಾರ, ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅವರನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಿತ್ತು. ಈ ನಿರ್ಧಾರ ವ್ಯಾಪಕ ಆಕ್ರೋಶಕ್ಕೆ ಒಳಗಾಗಿತ್ತು.
ಇದರ ವಿರುದ್ಧ ಬಿಲ್ಕಿಸ್ ಬಾನು ಮತ್ತೊಂದು ಸುತ್ತಿನ ಕಾನೂನು ಹೋರಾಟ ನಡೆಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಗುಜರಾತ್ ಸರ್ಕಾರ, 11 ಮಂದಿ ಅಪರಾಧಿಗಳಿಗೆ ನೀಡಿದ್ದ ವಿನಾಯತಿಯನ್ನು ರದ್ದುಗೊಳಿಸಿತ್ತು ಮತ್ತು ಜನವರಿ 21 ರೊಳಗೆ ಶರಣಾಗುವಂತೆ ಅಪರಾಧಿಗಳಿಗೆ ಆದೇಶಿಸಿತ್ತು.