ಡೈಲಿ ವಾರ್ತೆ: 22/Jan/2024
ವಗ್ಗದಲ್ಲಿ ನಡೆದ ದರೋಡೆ ಪ್ರಕರಣ: ಆರೋಪಿಗಳನ್ನು ಪತ್ತೆ ಹಚ್ಚಿದ ಬಂಟ್ವಾಳ ಪೋಲೀಸ್ ತಂಡ, ಜಿಲ್ಲಾ ಪೋಲೀಸ್ ಇಲಾಖೆಯಿಂದ ಬಹುಮಾನ ಘೋಷಣೆ!
ಬಂಟ್ವಾಳ : ತಾಯಿ ಮಗಳಿಗೆ ಚಾಕು ತೋರಿಸಿ ಲಕ್ಷಾಂತರ ರೂ ಮೌಲ್ಯದ ನಗ ನಗದು ದರೋಡೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೋಲೀಸರ ತಂಡ ಒಟ್ಟು ಏಳು ಮಂದಿ ಆರೋಪಿಗಳನ್ನು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲುಕಿನ ಮಾಳ ಗ್ರಾಮದ ದರ್ಖಾಸು ಮಲ್ಲಾರು ನಿವಾಸಿ ಗಣೇಶ್ ನಾಯ್ಕ್, ದರ್ಖಾಸು ಮಾಳ – ಮಲ್ಲಾರು ನಿವಾಸಿ ದಿನೇಶ್ ನಾಯ್ಕ್, ಮಾಳ ಗ್ರಾಮದ ಇಂದಿರಾನಗರ ನಿವಾಸಿ ಸಾಗರ್ ಶೆಟ್ಟಿ, ಮಂಗಳೂರು ಐಕಳ ಗ್ರಾಮದ ಬಳ್ಳಂಜೆ ಮುಂಡಿಕಾಡು ನಿವಾಸಿ ರಾಕೇಶ್ ಎಲ್ ಪಿಂಟೋ, ಕಡಬ ತಾಲೂಕಿನ ಕಾಯ್ಮುಣ ಗ್ರಾಮದ ಕೆಲೆಂಬೇರಿ ಬೆಳಂದೂರು ನಿವಾಸಿಗಳಾದ ಎಂ.ಸೀತಾರಾಮ, ಸುದೀರ್ ಹಾಗೂ ಮೂಲತ: ಬಂಟ್ವಾಳ ತಾಲೂಕಿನ ಇರಾ ಗ್ರಾಮ, ಪ್ರಸ್ತುತ ಚಿಕ್ಕಮಗಳೂರು ಗೌರಿ ಕಾಲುವೆ ನಿವಾಸಿ ಮಹಮ್ಮದ್ ಹನೀಫ್ ಬಂಧಿತ ಆರೋಪಿಗಳು.
ಬಂಧಿತರಿಂದ ದರೋಡೆಗೈದ 3.15 ಲಕ್ಷ ಮೌಲ್ಯದ 54 ಗ್ರಾಂ ಚಿನ್ನಾಭರಣ ಹಾಗೂ 10 ಲಕ್ಷ ಮೌಲ್ಯದ ಇನ್ನೋವಾ ಮತ್ತು ಇಂಡಿಕಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ವಿವರ
ಜ.11 ರಂದು ಬೆಳಗ್ಗೆ ಸುಮಾರು 6-15 ರೈ ವೇಳೆಗೆ ಬಂಟ್ವಾಳ ತಾಲೂಕಿನ ವಗ್ಗ ಸಮೀಪದ ಅಂಚಿಕಟ್ಟೆ ಮೇನಾಡು ನಿವಾಸಿ ಮರೀಟಾ ಸಿಂಥಿಯಾ ಪಿಂಟೋ ಎಂಬವರ ಮನೆಗೆ ಬಂದ ಮುಸುಕುದಾರಿಗಳು ಮನೆಯಲ್ಲಿದ್ದ ತಾಯಿ ಪ್ಲೋರಿನಾ ಪಿಂಟೊ ಹಾಗೂ ಮಗಳು ಮರಿಟಾ ಪಿಂಟೋ ಅವರಿಗೆ ಚೂರಿ ತೋರಿಸಿ ಗೊದ್ರೇಜ್ ಕೀ ನೀಡುವಂತೆ ಹೆದರಿಸಿದ್ದು, ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿ ಕಪಾಟಿನ ಕೀ ಪಡೆದು ಚಿನ್ನ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಅವರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣವನ್ನು ಪತ್ತೆ ಹಚ್ಚಲು ಮೂರು ವಿಶೇಷ ತಂಡವನ್ನು ರಚಿಸಿದ್ದರು.
ಪ್ರಕರಣದ ಗಂಭೀರತೆಯನ್ನು ಮನಗಂಡ ಎಸ್.ಪಿ.ರಿಷ್ಯಂತ್ ಅವರು ಹೆಚ್ಚುವರಿ ಪೋಲೀಸ್ ಅಧೀಕ್ಷರುಗಳಾದ ಧರ್ಮಪ್ಪ ಮತ್ತು ರಾಜೇಂದ್ರ ಸಹಭಾಗಿತ್ವ ದಲ್ಲಿ ಬಂಟ್ವಾಳ ಡಿ.ವೈ.ಎಸ್.ಪಿ
ಎಸ್. ವಿಜಯಪ್ರಸಾದ್ ನೇತ್ರತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ನಿರೀಕ್ಷಕ ಶಿವಕುಮಾರ್, ಪುಂಜಾಲಕಟ್ಟೆ ಠಾಣಾಧಿಕಾರಿ ನಂದಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ಹರೀಶ್ ಎಂ.ಆರ್, ಅವರ ಮೂರು ವಿಶೇಷ ತಂಡಗಳನ್ನು ರಚಿಸಿ ಅಪರಾಧ ವಿಭಾಗದ ಸಹಾಯಕ ಉಪ ನಿರೀಕ್ಷಕ ಗಿರೀಶ್, ಹೆಡ್ ಕಾನ್ಸ್ಟೇಬಲ್ ಗಳಾದ ರಾಧಾಕೃಷ್ಣ, ಸುಜು, ಉದಯ ರೈ, ಅದ್ರಾಮ, ಪ್ರವೀಣ್ ರೈ, ಪ್ರವೀಣ್ , ಸಂದೀಪ್, ರಾಹುಲ್, ಇರ್ಶಾದ್, ರಾಜೇಶ್, ಹರಿಶ್ಚಂದ್ರ, ಸಿಬ್ಬಂದಿ ಗಳಾದ ಪುನೀತ್, ರಮ್ಜಾನ್, ಯೋಗೇಶ್ ಡಿ.ಎಲ್, ಕುಮಾರ್ ಎಚ್, ಕೆ.ವಿನಾಯಕ ಬಾರ್ಕಿ, ಜಗದೀಶ್ ಅತ್ತಾಜೆ, ಝಮೀರ್ ಖಲಾರಿ, ಎ.ಹೆಚ್.ಸಿ.ಗಳಾದ ಕುಮಾರ್, ಮಹಾಂತೇಶ್, ಜಿಲ್ಲಾ ಪೋಲೀಸ್ ಕಚೇರಿಯ ಗಣಕಯಂತ್ರ ವಿಭಾಗದ ದಿವಾಕರ್ , ಸಂಪತ್ ಅವರ ತಂಡ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೋಲಿಸರ ವಿಶೇಷ ಪ್ರಯತ್ನದ ಮೂಲಕ ಆರೋಪಿಗಳ ಪತ್ತೆ ಕಾರ್ಯವನ್ನು ಮೆಚ್ಚಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನವನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.