ಡೈಲಿ ವಾರ್ತೆ: 23/Jan/2024

ಕಲಬುರಗಿ: ಅಂಬೇಡ್ಕರ್ ಮೂರ್ತಿಗೆ ಅವಮಾನ- ಭುಗಿಲೆದ್ದ ಆಕ್ರೋಶ, ಹೆದ್ದಾರಿ ತಡೆದು ಪ್ರತಿಭಟನೆ!

ಕಲಬುರಗಿ: ನಗರಕ್ಕೆ ಹೊಂದಿಕೊಂಡಿರುವ ಕೋಟ್ನೂರು (ಡಿ) ಗ್ರಾಮದ ಅಂಬೇಡ್ಕರ್ ಪ್ರತಿಮೆಗೆ ಕೆಲವು ಕಿಡಿಗೇಡಿಗಳು ಅವಮಾನ ಮಾಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯ ಹೆದ್ದಾರಿ ತಡೆದು ಭಾರಿ ಪ್ರತಿಭಟನೆ ನಡೆಸಿದ್ದಾರೆ.

ರಸ್ತೆಯ ಪಕ್ಕದಲ್ಲೇ ಅಂಬೇಡ್ಕರ್ ಮೂರ್ತಿ‌ ಇದ್ದು ಕೊರಳಿಗೆ ಪಾದರಕ್ಷೆ ಹಾರವನ್ನು ಹಾಕಿ ಅವಮಾನಿಸಿದ್ದಾರೆ. ಈ ಘಟನೆ ರಾತ್ರಿ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದು, ಕಿಡಿಗೇಡಿಗಳನ್ನು‌ ಕೂಡಲೇ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಮುಖಂಡ ದಿನೇಶ್ ದೊಡ್ಡಮನಿ ಹಾಗೂ ಇತರೆ ದಲಿತ ಮುಖಂಡರ ನೇತೃತ್ವದಲ್ಲಿ ‌ಪ್ರತಿಭಟನೆ ಮಾಡಲಾಗುತ್ತಿದೆ.

ಸ್ಥಳಕ್ಕೆ ನಗರ ಡಿಸಿಪಿ ಸಿಕ್ರಿವಾಲ್ ಸೇರಿದಂತೆ ಪೋಲೀಸರು ಆಗಮಿಸಿದ್ದಾರೆ. ಪರಿಸ್ಥಿತಿ ಬಿಗುವಿನಿಂದ‌ ಕೂಡಿದೆ. ಜೇವರ್ಗಿ ಸೇರಿದಂತೆ ಇತರೆ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ಬೀದರ್ – ಶ್ರೀರಂಗಪಟ್ಟಣ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟನೆ ಮಾಡಲಾಗುತ್ತಿದೆ. ಪೊಲೀಸರು‌ ಬಂದ ಬಳಿಕೆ ತುಸು ಸಡಿಲಿಕೆ ಮಾಡಲಾಗಿದೆ. ಆದರೆ, ಕಿಡಿಗೇಡಿಗಳ ಬಂಧನ ಕೂಡಲೇ ಮಾಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ಮುಖಂಡರು‌ ತಿಳಿಸಿದ್ದಾರೆ.
ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಮೂರ್ತಿ‌ ಶುಚಿಗೊಳಿಸಿ ಹೂವಿನ ಹಾರ ಹಾಕಿ ನಮಿಸಿದರು. ಇದರಿಂದ ವಾತಾವರಣ ತುಸು ತಣ್ಣಗಾಗಿದೆ.