ಡೈಲಿ ವಾರ್ತೆ: 23/Jan/2024
ಸಿಪಿಐ ನಾಯಕ ಎನ್. ಎ. ಹಮೀದ್ ನಿಧನ
ಬಂಟ್ವಾಳ : ರೈತ ಕಾರ್ಮಿಕ ಮುಖಂಡ, ದ.ಕ ಜಿಲ್ಲಾ ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕ ಸುಮಾರು ವರ್ಷ ಪ್ರಾಯದ ಕಾಮ್ರೆಡ್. ಎನ್. ಎ. ಹಮೀದ್ (64) ಅರಿಮೂಲೆ ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಸ್ವ ಗೃಹದಲ್ಲಿ ನಿಧನರಾದರು.
ಯೌವನದಲ್ಲಿ ಸಿಪಿಐ ನ ಯುವಜನ ಸಂಘಟನೆ (ಎಐವೈಎಫ್) ನ ನಾಯಕರಾಗಿ ನಂತರ ಸಿಪಿಐ ನ ಹಿರಿಯ ಧುರೀಣ ದಾಸಪ್ಪ ಮಾಸ್ಟರ್ ವಿಟ್ಲ ಇವರ ನಾಯಕತ್ವಕ್ಕೆ ಪ್ರೇರಿತರಾಗಿ ರೈತ ಸಂಘಟನೆ ಹಾಗೂ ಕಾರ್ಮಿಕ ಚಳವಳಿಗಳಲ್ಲಿ ಭಾಗವಹಿಸುತ್ತಾ ಭಾರತ ಕಮ್ಯೂನಿಸ್ಟ್ ಪಕ್ಷದ ಸದಸ್ಯರಾಗಿ ನಿರಂತರ ಹಲವು ವರ್ಷಗಳ ಕಾಲ ಹೋರಾಟದಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದರು. ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಸಂಘಟನೆಯನ್ನು ಕಟ್ಟಿ ಅವರ ಹಕ್ಕುಭಾದ್ಯತೆಗಳಿಗಾಗಿ ಅವಿರತ ಶ್ರಮಿಸಿದ್ದರು. ಒಬ್ಬ ರಂಗ ಕಲಾವಿದನಾಗಿ ಅನೇಕ ಸಾಮಾಜಿಕ ನಾಟಕಗಳಲ್ಲಿ ತನ್ನ ಚಾಕ ಚಾತುರ್ಯವನ್ನು ಪ್ರದರ್ಶಿಸಿ ಉತ್ತಮ ನಟನೆಂಬ ಹೆಗ್ಗಲಿಕೆಗೆ ಪಾತ್ರರಾಗಿದ್ದರು.
ಮೃತರು ತಾಯಿ ಹಾಗೂ ಇಬ್ಬರು ಸಹೋದರರು ಮತ್ತು ಓರ್ವ ಸಹೋದರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಸಿಪಿಐ ನ ಮಾಜಿ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ವಿ.ರಾವ್, ಸಿಪಿಐ ಜಿಲ್ಲಾ ಸಹಕಾರ್ಯದರ್ಶಿ ವಿ.ಸೀತಾರಾಂ ಬೇರಿಂಜ, ಸಿಪಿಐ ಮಂಗಳೂರು ತಾಲೂಕು ಕಾರ್ಯದರ್ಶಿ ಎಂ.ಕರುಣಾಕರ ಮಾರಿಪಳ್ಳ, ಸಿಪಿಐ ಹಿರಿಯ ಮುಂದಾಳು ಬಿ..ಬಾಬು ಭಂಡಾರಿ, ಸಿಪಿಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್, ಸಿಪಿಐ ಬಂಟ್ವಾಳ ತಾಲೂಕಿನ ಸಹ ಕಾರ್ಯದರ್ಶಿ ಪ್ರೇಮನಾಥ ಕೆ, ಸಿಪಿಐ ಮಂಗಳೂರು ತಾಲೂಕು ಸಹ ಕಾರ್ಯದರ್ಶಿ ತಿಮ್ಮಪ್ಪ ಕೆ, ಸಿಪಿಐ ಜಿಲ್ಲಾ ನಾಯಕ ಬಿ.ಎಂ ಹಸೈನಾರ್ ಕಡಂಬು, ಸಿಪಿಐ ತಾಲೂಕಿನ ನಾಯಕರುಗಳಾದ ಎಂ.ರಾಮ ಮುಗೇರ, ಒ.ಕೃಷ್ಣ, ಸೀತರಾಮ, ಆನಂದ, ನಾಗೇಶ್, ಮೊದಲಾದವರು ಪಾಲ್ಗೊಂಡರು.
ಮೃತರ ಬಗ್ಗೆ ಸಿಪಿಐ ಕರ್ನಾಟಕ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹಾಗೂ ಎಐಟಿಯುಸಿ ಕರ್ನಾಟಕ ರಾಜ್ಯ ಮಂಡಳಿ ಪ್ರ.ಕಾರ್ಯದರ್ಶಿ ಡಿ.ಎ. ವಿಜಯ ಭಾಸ್ಕರ್, ತೀವ್ರ ಸಂತಾಪ ಸೂಚಿಸಿದ್ದಾರೆ.