ಡೈಲಿ ವಾರ್ತೆ: 28/Jan/2024

6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಬಂಧನ

ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರದ ಗೋದಾಮಿನಲ್ಲಿದ್ದ 6 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರ ಸಹೋದರ ರಾಜು ರಾಠೋಡ್‌ನನ್ನ ಬಂಧಿಸಲಾಗಿದೆ.

ರಾಜು ರಾಠೋಡ್‌ಗೆ ಸೇರಿದ ಗುರುಮಠಕಲ್‌ನಲ್ಲಿನ ಲಕ್ಷ್ಮಿ ತಿಮ್ಮಪ್ಪ ವೇರ್ ಹೌಸ್ ಗೋಡೌನ್‌ನಲ್ಲಿ 550 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್ ಮಾಡಿದ ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಹಾಗೂ ಸುರಪುರ ಸಿಪಿಐ ಎಸ್.ಎಂ ಪಾಟೀಲ್ ನೇತೃತ್ವದ ತಂಡ ತಡರಾತ್ರಿ ರಾಜು ರಾಠೋಡ್‌ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಕಳೆದ 15 ದಿನಗಳ ಹಿಂದೆ ಇದೇ ರಾಜು ರಾಠೋಡ್ ಒಡೆತನದ ಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್‌ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಈ ಘಟನೆಯ ನಂತರ ತಲೆ ಮರೆಸಿಕೊಂಡಿದ್ದ ರಾಜು ರಾಠೋಡ್ ವಾರದ ಹಿಂದೆ ಬೇಲ್ ಪಡೆದಿದ್ದ. ಶನಿವಾರ ತಡರಾತ್ರಿ ಮತ್ತೆ ದಾಳಿ ಮಾಡಿದ ಪೊಲೀಸರಿಗೆ ವೇರ್‌ಹೌಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಪತ್ತೆಯಾಗಿದೆ.

ಈ ಹಿಂದೆ ಇದೇ ಅಕ್ಕಿ ಕಳ್ಳತನ ಕೇಸ್ ನಲ್ಲಿ ಶಹಾಪುರ ಪೊಲೀಸರು ತನ್ನನ್ನ ಬಂಧಿಸಿದ್ದಾರೆ ಎಂದು ದೆಹಲಿಯಿಂದಲೇ ಹೇಳಿಕೊಂಡಿದ್ದ ಮಣಿಕಂಠ ರಾಠೋಡ್ ತದನಂತರ ಬಂಧನಕ್ಕೆ ಒಳಗಾಗದೇ ನೇಪಾಳದ ಕಠ್ಮಂಡುವಿಗೆ ಪ್ರಯಾಣ ಬೆಳೆಸಿದ್ದ. ಇದೀಗ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.