ಡೈಲಿ ವಾರ್ತೆ: 28/Jan/2024
ಕುಂದಾಪುರದಲ್ಲಿ ಯುವ ಮನೀಶ್ ಹೋಟೆಲ್ ಶುಭಾರಂಭ
ಕುಂದಾಪುರ: ಸುಂದರ ಕಡಲ ತಡಿ, ಪ್ರಖ್ಯಾತ ದೇವಾಲಯಗಳನ್ನು ಹೊಂದಿರುವ ಕುಂದಾಪುರವೂ ಸೇರಿದಂತೆ ಇಡೀ ಉಡುಪಿ ಜಿಲ್ಲೆ ಆಕರ್ಷಕ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇಲ್ಲಿ ವಿಪುಲ ಅವಕಾಶಗಳಿವೆ. ಪ್ರವಾಸಿಗರು ಗೋವಾ ಇನ್ನಿತರೇಡಿಗಳಿಗೆ ತೆರಳುವುದನ್ನು ತಡೆದು ಇಲ್ಲಿಯೇ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಇಲ್ಲಿನ ಉದ್ಯಮಿಗಳು ಗಮನಹರಿಸಬೇಕು. ಅವಶ್ಯಕ ಸಹಕಾರಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೀಡುತ್ತವೆ ಎಂದು ಕರ್ನಾಟಕ ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಗಾಂಧಿ ಮೈದಾನದೆದುರು ನೂತನವಾಗಿ ಆರಂಭಗೊಂಡ ಐಷಾರಾಮಿ ಹೋಟೆಲ್ ಯುವ ಮನೀಶ್ ಅನ್ನು ಉದ್ಘಾಟಿಸಿ ಅವರು ಶುಭಹಾರೈಸಿದರು.
ಉಡುಪಿ ಜಿಲ್ಲೆಯ ಉದ್ಯಮಿಗಳ ಬಗ್ಗೆ ಮೆಚ್ಚುಗೆಯ ಮಾತಾಡಿದ ಅವರು, ಕರಾವಳಿಯವರು ಉದ್ಯಮ ನಡೆಸದ ಸ್ಥಳಗಳಿಲ್ಲ. ಇಲ್ಲಿನವರು ಶ್ರಮಿಕರು ಮತ್ತು ಪ್ರಾಮಾಣಿಕರು. ಆದ್ದರಿಂದ ಇವರು ಎಲ್ಲಿ ಯಾವ ವ್ಯವಹಾರ ಕೈಗೊಂಡರೂ ಯಶಸ್ವಿಗಳಾಗುತ್ತಾರೆ ಎಂದು ಶ್ಲಾಘಿಸಿದರು.
ಲಸಿಕಾ ಸಸ್ಯಾಹಾರಿ ರೆಸ್ಟೋರೆಂಟ್ ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗವಿಕಲ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕುಂದಾಪುರ ನಗರದ ಉತ್ತಮ ಹೋಟೆಲ್ ಆಗಿ ಬೆಳೆಯಲಿ ಎಂದು ಹಾರೈಸಿದರು.
ಉದ್ಯಮ ಪಾಲುದಾರ ಬಿ. ಉದಯ ಕುಮಾರ್ ಶೆಟ್ಟಿ ಸ್ವಾಮೀಜಿಯವರನ್ನು ಗೌರವಿಸಿ, ಪ್ರಸ್ತಾವಿಕ ನುಡಿಯನ್ನಾಡಿದರು.
ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನಗೈದರು.
ಮುಖ್ಯ ಅತಿಥಿಗಳಾದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ,ವಿಶ್ವವಾಣಿ ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿದರು.
ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜಿಲ್ಲೆಗೆ ಆದಾಯ ಬರಬೇಕಾದರೆ ಕೋಸ್ಟಲ್ ಟೂರಿಸಂ ಅಭಿವೃದ್ಧಿ ಮಾಡಬೇಕು. ಅದರ ಜೊತೆಗೆ ಟೆಂಪಲ್ ಟೂರಿಸಂಗೆ ಜಾಸ್ತಿ ಒತ್ತು ನೀಡಬೇಕು. ಇದರಿಂದ ಖಂಡಿತ ಜಿಲ್ಲೆ ಅಭಿವೃದ್ಧಿ ಹೊಂದುತ್ತದೆ. ನಮ್ಮ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಇನ್ನು ಬಾಕಿ ಇರುವುದು ಕೋಸ್ಟಲ್ ಟೂರಿಸಂನಲ್ಲಿ ಮಾತ್ರ. ಟೂರಿಸಮ್ ಯಶಸ್ಸಿಗೆ ಉತ್ತಮ ರಸ್ತೆಗಳು ಕಾರಣವಾಗುತ್ತವೆ. ಆದಷ್ಟು ಕರಾವಳಿಯ ರಸ್ತೆಗಳು ದುರಸ್ಥಿಗೊಳ್ಳಬೇಕು ಎಂದು ಹೇಳಿದರು.
ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ. ಶ್ರೀನಿವಾಸ್ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ಶಾಸಕ ಗುರುರಾಜ್ ಶೆಟ್ಟಿ ಇವರು ಶುಭಹಾರೈಸಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಪೂಜಾರಿ, ಫಾರ್ಚ್ಯುನ್ ಗ್ರೂಪ್ ಆಫ್ ಹೋಟೆಲ್ಸ್, ದುಬೈ ಇದರ ವ್ಯವಸ್ಥಾಪಕ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ, ಬೆಂಗಳೂರು ರೆಡಿಸ್ಸನ್ ಬ್ಲೂ ಆರ್ಟಿಯಾ ನಿರ್ದೇಶಕ ಕೆ. ನಾಗರಾಜ, ರಾಜಕೀಯ ಮುಖಂಡರಾದ ಮೊಳಹಳ್ಳಿ ಎಂ. ದಿನೇಶ್ ಹೆಗ್ಡೆ, ಪಾಲುದಾರರು ವಿನಯ್ ಶೆಟ್ಟಿ, ಮನೀಶ್ ಶೆಟ್ಟಿ ಮೊದಲದವರು ಉಪಸ್ಥಿತರಿದ್ದರು. ಉದ್ಯಮಪತಿಗಳು, ರಾಜಕೀಯ ಮುಖಂಡರು ಹಾಜರಿದ್ದರು.
ಉದ್ಯಮ ಪಾಲುದಾರ ಜಯಶೀಲ ಎನ್. ಶೆಟ್ಟಿ ಸ್ವಾಗತಿಸಿದರು.
ಕೆ. ಸಿ ರಾಜೇಶ್ ನಿರೂಪಿಸಿ, ವಂದಿಸಿದರು.