ಡೈಲಿ ವಾರ್ತೆ: 30/Jan/2024
ಮುಂಬೈ ಯುವಕನಿಂದ ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ವಿಶಿಷ್ಟ ಢಮರು ಸೇವೆ
ಮುಂಬೈಯಿಂದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸುಮಾರು ನಲವತ್ತೈದರ ಹರೆಯದ ಸಚಿನ್ ಎಂಬ ಯುವಕ ದೇವರಿಗೆ ವಿಶಿಷ್ಟ ಢಮರು ಸೇವೆಯನ್ನು ಸಲ್ಲಿಸಿದರು.
ಸೋಮವಾರ ಬೆಳಿಗ್ಗೆ ಹನ್ನೊಂದು ಗಂಟೆಯ ವೇಳೆಗೆ ದೇವಸ್ಥಾನಕ್ಕೆ ಬಂದ ಇವರು, ತಮ್ಮ ಎರಡೂ ಕೈಗಳಲ್ಲಿ ಎರಡು ಢಮರುಗಳನ್ನು ಹಿಡಿದು ಲಯಬದ್ಧವಾಗಿ ನುಡಿಸುವುದರ ಮೂಲಕ ಶಿವನಿಗೆ ಪ್ರಿಯವಾದ ಈ ವಿಶಿಷ್ಟ ಸೇವೆಯನ್ನು ಸಲ್ಲಿಸಿದರು. ಎಲ್ಲಾ ಪರಿವಾರ ದೇವರುಗಳ ಮುಂದೆಯೂ ನಿಂತು ಸಚಿನ್ ಲಯಬದ್ಧವಾಗಿ ಢಮರು ನುಡಿಸುವುದನ್ನು ನೆರೆದ ಭಕ್ತರು ಆಶ್ಚರ್ಯಚಕಿತರಾಗಿ ವೀಕ್ಷಿಸಿದರು. ಸೋಮವಾರವೇ ಸಂಕಷ್ಟಹರ ಚತುರ್ಥಿಯೂ ಇದ್ದುದರಿಂದ ಭಕ್ತ ಸಂದಣಿ ಹೆಚ್ಚಾಗಿಯೇ ಇದ್ದಿತ್ತು.
ಜೀನ್ಸ್ ಪ್ಯಾಂಟ್, ಸಾದಾ ಟಿ-ಶರ್ಟ್ ತೊಟ್ಟು, ಶಿಖೆ ಬಿಟ್ಟಿದ್ದ ಯುವಕ ತನ್ನೆರಡೂ ಕೈಗಳಿಂದ ಢಮರುಗಳನ್ನು ನಿಧಾನ ಗತಿಯಿಂದ ವೇಗದ ತಾರ ಸ್ಥಾಯಿವರೆಗೂ ನುಡಿಸುವ ನೈಪುಣ್ಯತೆ ಹೊಂದಿದ್ದರು.
ಮುಂಬೈಯಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ, ಅವಿವಾಹಿತನಾಗಿರುವ ಈತ ಆಧ್ಯಾತ್ಮದತ್ತ ಆಕರ್ಷಿತನಾಗಿ ಉದ್ಯೋಗ ತೊರೆದು ಸನ್ಯಾಸ ಸ್ವೀಕರಿಸಲು ಅಣಿಯಾಗಿರುವರಂತೆ. ಸನ್ಯಾಸಿಯಾಗಿ ನಂತರ ಅಘೋರಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಸಚಿನ್ ಜೊತೆ ಐಶ್ವರ್ಯ ಮತ್ತು ಪಾರಸ್ ಎಂಬಿಬ್ಬರು ಇದ್ದರು.