ಡೈಲಿ ವಾರ್ತೆ: 07/Feb/2024

ಫೆ.9, 10 ರಂದು ಗಿಳಿಯಾರಿನಲ್ಲಿ ಅಭಿಮತ ಸಂಭ್ರಮ; ಸಹಸ್ರ ನಾಳಿಕೇರ ಗಣಯಾಗ

ಕೋಟ: ಜನಸೇವಾ ಟ್ರಸ್ಟ್ ಮೂಡುಗಿಳಿಯಾರು ಆಶ್ರಯದಲ್ಲಿ ಫೆ.9 ಮತ್ತು 10 ರಂದು ಮೂಡುಗಿಳಿಯಾರಿನ ಅಲ್ಸೆಕೆರೆ ಮಹಾಲಿಂಗೇಶ್ವರ ದೇಗುಲದದಲ್ಲಿ ಅಭಿಮತ ಸಂಭ್ರಮ
ಕಾರ್ಯಕ್ರಮ ಜರಗಲಿದೆ.

ಈ ಪ್ರಯುಕ್ತ ಫೆ.9 ರಂದು ಬೆಳಗ್ಗೆ ಜಿ.ಎಂ. ಸೋಮಯಾಜಿ
ನೇತೃತ್ವದಲ್ಲಿ ಸಹಸ್ರ ನಾಳಿಕೇರ ಗಣಯಾಗ ನಡೆಯಲಿದ್ದು, ಶೃಂಗೇರಿ ಮಠದ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಅಪರಾಹ್ನ 12:30ಕ್ಕೆ ಮಹಾಅನ್ನಸಂತರ್ಪಣೆ ಜರಗಲಿದೆ ಎಂದು ಜನಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ್ ಶೆಟ್ಟಿ
ಕೋಟದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫೆ.10 ರಂದು ರಾತ್ರಿ 6:30 ರಿಂದ ಅಭಿಮತ ಸಂಭ್ರಮ ನಡೆಯಲಿದ್ದು, ನಂದಗೋಕುಲ ತಂಡದಿಂದ
ಆನೆಗುಡ್ಡೆ ವಿನಾಯಕ ನೃತ್ಯ ಚರಿತ್ರೆ, ಅನಂತರ ಪಟ್ಲ-ಜನ್ಸಾಲೆ ಸ್ವರನೂಪುರ, ಖ್ಯಾತ ಭಾಗವತ ದಿ. ಕಾಳಿಂಗ ನಾವಡರಿಗೆ ಮರಣೋತ್ತರವಾಗಿ ಕೀರ್ತಿ ಕಲಶ ಪ್ರಶಸ್ತಿ ಪ್ರದಾನ ಮಾಡಲಿದ್ದು, ನಾವಡರ ಪತ್ನಿ ವಿಜಯಶ್ರೀ ನಾವಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕೃಷಿ ಸಾಧಕ ಗಿಳಿಯಾರು ಭರತ್ ಕುಮಾರ್ ಶೆಟ್ಟಿ, ಉಚಿತ ಆಂಬುಲೆನ್ಸ್ ಸೇವೆಯ ಸಾಬ್ರಕಟ್ಟೆಯ ಜನನಿ ಯುವ ಕನ್ನಡ ಸಂಘಟನೆ, ಕಬಡ್ಡಿಪಟು ರಾಜೇಂದ್ರ ಎಸ್. ಸುವರ್ಣ ಅವರಿಗೆ ಯಶೋಗಾಥೆ ಗೌರವವನ್ನು ನೀಡಿ ಗೌರವಿಸಲಾಗುತ್ತದೆ. ಸಾವಿರದ ಹಾಡುಗಳು ಜನಪದ ರಂಗಗೀತೆ, ಡಿವೈನ್ ಬೀಟ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ಅಭಿಮತ ಕಾರ್ಯಕ್ರಮ ಸಂಯೋಜಕ ಉದಯ ಶೆಟ್ಟಿ ಪಡುಕರೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರು, ಟೀಮ್ ಅಭಿಮತದ ಸಂಚಾಲಕ ಪ್ರವೀಣ್ ಯಕ್ಷಿಮಠ, ಅರುಣ್ ಶೆಟ್ಟಿ ಪಡುಮನೆ ಮೊದಲಾದವರಿದ್ದರು.