ಡೈಲಿ ವಾರ್ತೆ: 12/Feb/2024

ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ

ಸಂವಿಧಾನ ಜಾಗೃತಿ ಜಾಥಾ ಭವ್ಯ ಸ್ವಾಗತ ಕೋರಿದ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟಿ ಗ್ರಾಮಸ್ಥರು

ಮೆರಗು ಹೆಚ್ಚಿಸಿದ ಸಂವಿಧಾನ ಜಾಗೃತಿ ಜಾತಾ….

ಹರಪನಹಳ್ಳಿ : (ವಿಜಯನಗರ ಜಿಲ್ಲೆ) :- ಭಾರತದ ಸಂವಿಧಾನ ಅಂಗೀಕಾರಗೊಂಡು ಎಪ್ಪತ್ತೈದು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಸಂವಿಧಾನ ಜಾಥಾಗೆ ಈಗಾಗಲೇ ಚಾಲನೇ ನೀಡಲಾಗಿದೆ. ಸಂವಿಧಾನ ಜಾಗೃತಿ ಜಾಥಾ ವಿಜಯನಗರ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಗಳಲ್ಲಿ ಸಂಚರಿಸುವ ಮೂಲಕ ಜನ ಸಾಮಾನ್ಯರಿಗೆ ಸಂವಿಧಾನ ಮಹತ್ವ ಹಾಗೂ ಧ್ಯೇಯೋದ್ದೇಶಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ.

ಸಂವಿಧಾನ’ ಎಂಬುದು ಜೀವಸಂಕುಲಗಳ ಬದುಕನ್ನು ರಕ್ಷಿಸುತ್ತಾ, ಘನತೆಯ ಬದುಕನ್ನು ಕಟ್ಟಿಕೊಡುವ ಆಡಳಿತಾತ್ಮಕ ಕಾನೂನು. ಇಂತಹ ಮಾನವೀಯ ಸಂವಿಧಾನಕ್ಕಾಗಿ ಜಗತ್ತಿನಾದ್ಯಂತ ಹಲವಾರು ಕ್ರಾಂತಿಗಳು ಜರುಗಿವೆ. ಇಂಗ್ಲೆಂಡ್, ಅಮೆರಿಕ, ಪ್ರಾನ್ಸ್, ಜರ್ಮನಿ, ಇಟಲಿ, ಭಾರತ; ಹೀಗೆ ನೂರಾರು ದೇಶಗಳಲ್ಲಿ ಉಳ್ಳವರ ಅಟ್ಟಹಾಸದಿಂದ ಹಸಿವು, ಅವಮಾನ ಹಾಗೂ ಅಮಾನವೀಯ ನಡೆಗಳಿಂದ ನೊಂದು-ಬೆಂದಿದ್ದ ಜನ ತಮ್ಮ ಉಳಿವಿಗಾಗಿ ಕ್ರಾಂತಿಯನ್ನೇ ನಡೆಸಿ ಗೆದ್ದದ್ದು ಈಗ ಇತಿಹಾಸ.

ನಡೆ-ನುಡಿಗೆ ಹೆಸರಾಗಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಬಾಬಾಸಾಹೇಬರ ಆಲೋಚನೆಗಳಿಗೆ ನೀರೆರೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪನವರ ಮಹತ್ವಾಕಾಂಕ್ಷಿ ಆಂದೋಲನವಾದ ‘ಸಂವಿಧಾನ ಜಾಗೃತಿ ಜಾಥಾ’ ಅರಿವಿನ ಕಹಳೆಯನ್ನು ಊದುತ್ತಿದೆ. ಈ ಜ್ಞಾನದ ಕ್ರಾಂತಿಕಹಳೆ ಮನುಷ್ಯರ ಅಂತರಂಗದೊಳಗಿರುವ ಕತ್ತಲೆಗೆ ಬೆಳಕಾಗಲಿ. ಆ ಮೂಲಕ ಜಾತಿ ಸಂಕೋಲೆಗಳಿಂದ ಬಿಡುಗಡೆಗೊಂಡ ಸಮಾಜ ಮಾನವೀಯ ನೆಲೆಯಲ್ಲಿ ಬದುಕುತ್ತಾ, ಪ್ರಜ್ಞೆ, ಕರುಣೆ, ಸಮತೆ, ಮೈತ್ರಿ ಹಾಗೂ ದಯೆಯನ್ನೇ ಪ್ರತಿಪಾದಿಸುತ್ತಾ ಏಳಿಗೆ ಹೊಂದಲಿ ಎಂಬುದು ಸಂವಿಧಾನದ ಆಶಯ.

ಜನವರಿ 26ರಂದು ಸಂವಿಧಾನ ಜಾಗೃತಿ ಜಾತಾ ಕಾರ್ಯಕ್ರ ಉದ್ಘಾಟನೆ ಹಾಗೂ ಸ್ಥಬ್ದಚಿತ್ರದ ಚಾಲನೆಗೊಂಡ ಜಾತಾವು ಸೋಮವಾರ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟೆ ಗ್ರಾಮಕ್ಕೆ ಆಗಮಿಸಿದೆ.

ತೊಗರಿಕಟ್ಟಿ ಗ್ರಾಮಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥಕ್ಕೆ ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಇಒ ಪ್ರಕಾಶ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾದ ರೇಣುಕಾದೇವಿ ಮತ್ತು ಅಧಿಕಾರಿ ವರ್ಗದವರಿಂದ ಹಾಗೂ ತೊಗರಿಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಅಧಿಕಾರಿಗಳು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು.

ತದನಂತರ ಎತ್ತಿನ ಬಂಡಿ, ಬೈಕ್ ರ್ಯಾಲಿ, ಡೊಳ್ಳುಕುಣಿತ, ಹಲಗಿ, ತಮಟೆ ವಿವಿಧ ವಾದ್ಯಗಳ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತೊಗರಿಕಟ್ಟಿ ಹಾಗೂ ಕನ್ನನಾಯಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿಧ್ಯಾರ್ಥಿಗಳು ವಿವಿಧ ಮಹನೀಯರ ವೇಷಧಾರಿಗಳಾಗಿ ಮೆರವಣಿಗೆಗೆ ಮೆರಗು ತುಂಬಿದರು.

ತೊಗರಿಕಟ್ಟಿ, ಹಾರಕನಾಳ್, ಮಾಡ್ಲಿಗೇರಿ, ಕೂಲಹಳ್ಳಿ, ಸಂಚರಿಸಿ ಬಾಗಳಿಯಲ್ಲಿ ವಾಸ್ತವ್ಯವಾಗಲಿದೆ ಹಾಗೆಯೇ ನಮ್ಮ ಹರಪನಹಳ್ಳಿ ತಾಲ್ಲೂಕಿನಲ್ಲಿ ದಿನಾಂಕ :- 12-2-2024ರಿಂದ ದಿನಾಂಕ : – 19-2-2024ರವರಗೆ ಸಂವಿಧಾನ ಜಾಗೃತಿ ಜಾಥಾದ ರಥಾ ಕಾರ್ಯಕ್ರಮವಿರುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿಯಾದ ರೇಣುಕಾದೇವಿಯವರು ತಿಳಿಸಿದ್ದಾರೆ.

ನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಮಹತ್ವ ಹಾಗೂ ಅದರ ಧ್ಯೇಯೋದ್ದೇಶಗಳ ಕುರಿತು ಉಪನ್ಯಾಸ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲಾಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗ, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಅಧಿಕಾರಿಗಳು, ತೊಗರಿಕಟ್ಟಿ ಗ್ರಾಮದ ಡಿ.ಎಸ್.ಎಸ್ ಸಂಘದವರು, ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.