ಡೈಲಿ ವಾರ್ತೆ: 12/Feb/2024

ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಆದೇಶವನ್ನು ಪುನರ್ ಪರಿಶೀಲಿಸುವಂತೆ ಸಚಿವರಿಗೆ ಮನವಿ

ಬಂಟ್ವಾಳ : ಒಂದು ಎಕ್ರೆ ವರೆಗಿನ ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ನಿಂದ ಅನುಮೋದಿಸುವಂತೆ ಕೋರಿ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಂದಾವರ ಹಾಗೂ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿರಾಜ್ ಮದಕ ಅವರು ಮನವಿ ಸಲ್ಲಿಸಿದರು.

ಯೋಜನಾ ಪ್ರದೇಶವನ್ನು ಹೊರತುಪಡಿಸಿ ಇತರ ಗ್ರಾಮಾಂತರ ಪ್ರದೇಶಗಳಲ್ಲಿನ 1000 ಚದರ ಮೀಟರ್(0.25 ಎಕ್ರೆ) ಭೂ ಪರಿವರ್ತಿತ ಜಮೀನಿಗೆ ಗ್ರಾಮ ಪಂಚಾಯತ್ ನಿಂದ ಏಕ ನಿವೇಶನ ವಿನ್ಯಾಸ ಅನುಮೋದನೆ ಹಾಗೂ 1 ಎಕ್ರೆವರೆಗಿನ ಭೂ ಪರಿವರ್ತಿತ ಜಮೀನಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯವರು ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ನೀಡಲು 2014 ರಿಂದ 09-01-2024 ರ ವರೆಗೆ ಅಧಿಕಾರವನ್ನು ನೀಡಲಾಗಿತ್ತು. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಜನತೆಗೆ ತಮ್ಮ ಭೂ ಪರಿವರ್ತಿತ ಜಮೀನಿನಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಅನುಕೂಲವಾಗಿತ್ತು.

ಆದರೆ ಸರ್ಕಾರ ಹೊರಡಿಸಿರುವ ಹೊಸ ಆದೇಶದಿಂದ ಸ್ಥಳೀಯ ಯೋಜನಾ ಪ್ರದೇಶದ ಹೊರತಾದ ಗ್ರಾಮಾಂತರ ಪ್ರದೇಶದಲ್ಲಿ ಭೂ ಪರಿವರ್ತಿತ ಜಮೀನಿಗೆ ಏಕ ನಿವೇಶನ ಹಾಗೂ ಬಹುನಿವೇಶನ ವಿನ್ಯಾಸ ಅನುಮೋದನೆಯನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಅಡಿಯಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಕೈಗೊಳ್ಳುವಂತೆ ತಿಳಿಸಲಾಗಿದೆ.

ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು,ಬೆಳ್ತಂಗಡಿ, ಬಂಟ್ವಾಳ, ಮೂಡಬಿದ್ರೆಯಂತಹ ತಾಲೂಕುಗಳಿಂದ ಜನರು 0.05 ಎಕ್ರೆ ಜಮೀನಿನಲ್ಲಿ ಮನೆ ಕಟ್ಟ ಬೇಕಾದರೂ ಏಕ ನಿವೇಶನ ಅನುಮೋದನೆಯನ್ನು ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯಿಂದ ಪಡೆಯಬೇಕಾದ ಸಮಸ್ಯೆ ಎದುರಾಗಿದೆ. ಸದ್ರಿ ಕಛೇರಿಯಲ್ಲಿ ಸಿಬ್ಬಂದಿ ಕೊರತೆಯೂ ಇದ್ದು ಪ್ರಸ್ತುತ ಇರುವ ಟೌನ್ ಪ್ಲಾನರ್ ರವರು ಇಡೀ ಜಿಲ್ಲೆಯ ಗ್ರಾಮ ಪಂಚಾಯತ್ಗಳಿಂದ ಬರುವ ಕಡತಗಳ ವಿಲೇವಾರಿಗೆ ಸ್ಥಳ ಪರಿಶೀಲನೆ ನಡೆಸಿ ವಿನ್ಯಾಸ ಅನುಮೋದನೆ ನೀಡಲು ತಿಂಗಳುಗಳೇ ಹಿಡಿಯಬಹುದು. ಇದರಿಂದಾಗಿ ಜನ ಸಾಮಾನ್ಯರು ತೀವೃ ತೊಂದರೆಗೊಳಗಾಗುವುದರ ಜೊತೆ ಇದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸಬೇಕಾದ ಸನ್ನಿವೇಶ ಎದುರಾಗಿದೆ. ಮೇಲೆ ಹೇಳಿದ ಎಲ್ಲಾ ಸಮಸ್ಯೆಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಜನ ಸಾಮಾನ್ಯರನ್ನು ಮುಕ್ತಗೊಳಿಸಲು 0.25 ಎಕ್ರೆ ವರೆಗಿನ ಏಕ ನಿವೇಶನ ವಿನ್ಯಾಸ ಅನುಮೋದನೆಯನ್ನು ನೀಡುವ ಅಧಿಕಾರವನ್ನು ಮೊದಲಿನಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಹಾಗೂ ಮೇಲ್ಪಟ್ಟು 1 ಎಕ್ರೆ ವರೆಗಿನ ಏಕ/ಬಹು ನಿವೇಶನ ವಿನ್ಯಾಸ ಅನುಮೋದನೆಯನ್ನು ನೀಡುವ ಅಧಿಕಾರವನ್ನು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಯವರಿಗೆ ನೀಡುವಂತೆ ಪ್ರಸ್ತುತ ಆದೇಶವನ್ನು ಪುನರ್ ಪರಿಶೀಲಿಸಿ ಹೊಸ ಆದೇಶ ಹೊರಡಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶಿರ್ ಪೇರಿಮಾರ್ ಉಪಸ್ಥಿತರಿದ್ದರು