ಡೈಲಿ ವಾರ್ತೆ: 14/Feb/2024

ಕೇರಳ ಮೂಲದ ದಂಪತಿ ಹಾಗೂ ಅವರ 4 ವರ್ಷದ ಅವಳಿ ಮಕ್ಕಳು ಅಮೆರಿಕದಲ್ಲಿ ಶವವಾಗಿ ಪತ್ತೆ

ಅಮೇರಿಕ: ಅಮೆರಿಕದಲ್ಲಿ ಕೇರಳ ಮೂಲದ ದಂಪತಿ ಹಾಗೂ ಅವರ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.
ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆನಂದ್ ಸುಜಿತ್ ಹೆನ್ರಿ ಹಾಗೂ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು 4 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸಂಬಂಧಿಕರು ಕರೆ ಮಾಡಿದಾಗ ರಿಸೀವ್ ಮಾಡದ ಕಾರಣ ಅವರು ಮನೆಗೆ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ದಂಪತಿ ಶವ ಬಾತ್ ರೂಮ್ನಲ್ಲಿ ಕಂಡುಬಂದಿದೆ. ಇಬ್ಬರು ಮಕ್ಕಳು ಕೋಣೆಯಲ್ಲಿ ಶವವಾಗಿದ್ದರು.

ದಂಪತಿ ಮೈಮೇಲೆ ಗುಂಡಿನ ಗುರುತುಗಳಿದ್ದವು, ಮನೆಯಲ್ಲಿ ಯಾರೋ ಅಪರಿಚಿತರು ಬಂದಿರುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ ಕಿಟಕಿ ತೆರೆದಿತ್ತು ಅಲ್ಲಿಂದ ಯಾರಾದರೂ ಮನೆಯ ಒಳಗೆ ಬಂದಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.

ಬಾತ್ರೂಮ್ನಿಂದ 9 ಎಂಎಂ ಪಿಸ್ತೂಲ್ ಮತ್ತು ಲೋಡ್ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಂಭದಲ್ಲಿ ಇದು ಆತ್ಮಹತ್ಯೆ ಎಂದೆನಿಸದರೂ ಹತ್ಯೆ ಅನುಮಾನವನ್ನು ಕೂಡ ತಳ್ಳಿ ಹಾಕುವಂತಿಲ್ಲ. ಕೇರಳ ಮೂಲದ ಕುಟುಂಬ ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿತ್ತು.
ಸಾಫ್ಟ್‌ವೇರ್ ಎಂಜಿನಿಯರ್ ಆನಂದ್ ಮತ್ತು ಹಿರಿಯ ವಿಶ್ಲೇಷಕ ಆಲಿಸ್ ಎರಡು ವರ್ಷಗಳ ಹಿಂದೆ ನ್ಯೂಜೆರ್ಸಿಯಿಂದ ಸ್ಯಾನ್ ಮ್ಯಾಟಿಯೊ ಕೌಂಟಿಗೆ ಸ್ಥಳಾಂತರಗೊಂಡಿದ್ದರು. ನೆರೆಹೊರೆಯವರು ಹಾಗೂ ಸಹೋದ್ಯೋಗಿಗಳು ಇವರು ನಮಗೆ ಉತ್ತಮ ಸ್ನೇಹಿತರಾಗಿದ್ದರು, ಒಳ್ಳೆಯವರು ಎಂದೇ ಹೇಳಿದ್ದಾರೆ.

ನ್ಯಾಯಾಲಯದ ದಾಖಲೆ ಪ್ರಕಾರ ಆನಂದ್ ಡಿಸೆಂಬರ್ 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅದಲ್ಲಿಗೇ ನಿಂತಿತ್ತು. ಸ್ಯಾನ್ ಮ್ಯಾಟಿಯೊ ಕೌಂಟಿಯ ಕ್ರಿಮಿನಲ್ ಇನ್ವೆಸ್ಟಿಗೇಷನ್ ಬ್ಯೂರೋ (CIB) ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮೃತದೇಹಗಳನ್ನು ಸ್ಯಾನ್ ಮ್ಯಾಟಿಯೊ ಕೌಂಟಿ ಕರೋನರ್ ಅವರ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಭಾರತ ಮೂಲದ ದಂಪತಿ ಹಾಗೂ ಅವರ ಮಗಳು ಮನೆಯಲ್ಲೇ ಸಾವನ್ನಪ್ಪಿದ್ದರು. ಕಳೆದ ತಿಂಗಳಲ್ಲಿ, ಕನಿಷ್ಠ ಏಳು ಭಾರತ ಮೂಲದ ಜನರು ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.