ಬೆಂಗಳೂರು: ರಾಜ್ಯಸಭೆ ಚುನಾವಣೆ ಗೆಲುವಿನ ಸಂಭ್ರಮಾಚರಣೆ ವೇಳೆ ತಮ್ಮ ಬೆಂಬಲಿಗರೊಬ್ಬರು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ ಆರೋಪಕ್ಕೆ ರಾಜ್ಯಸಭಾ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ಸ್ಪಷ್ಟನೆ ನೀಡಿದ್ದಾರೆ. “ಕಾಂಗ್ರೆಸ್ ಜಿಂದಾಬಾದ್, ನಾಸಿರ್ ಹುಸೇನ್ ಜಿಂದಾಬಾದ್ ಎಂದು ಘೋಷಣೆಯನ್ನಷ್ಟೇ ನಾನು ಕೇಳಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ನಾನು ಕೇಳಿಲ್ಲ. ಆ ರೀತಿ ಕೂಗಿರುವುದು ನನಗೆ ಕೇಳಿಸಿಲ್ಲ. ಹಾಗೆ ಯಾರಾದರೂ ಘೋಷಣೆ ಕೂಗಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಿ” ಎಂದು ಹೇಳಿದರು.
ಡೈಲಿ ವಾರ್ತೆ: 28/Feb/2024
ರಾಜ್ಯಸಭೆ ಚುನಾವಣೆ ಗೆಲುವು ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆಗೆ ಸಯ್ಯದ್ ನಾಸೀರ್ ಹುಸೇನ್ ಸ್ಪಷ್ಟನೆ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪದ ವಿಚಾರವಾಗಿ ನಾಸಿರ್ ಹುಸೇನ್ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಸ್ಪಷ್ಟನೆ ನೀಡಿದ್ದಾರೆ. “ಕಾಂಗ್ರೆಸ್ನ ಮೂವರು ಅಭ್ಯರ್ಥಿಗಳ ಗೆಲುವಿನ ಸಂಭ್ರಮಾಚರಣೆ ವೇಳೆ ನಾನು ಅಲ್ಲಿಯೇ ಇದ್ದೆ. ಈ ವೇಳೆ ಹಲವು ಘೋಷಣೆಗಳು ಮೊಳಗುತ್ತಿದ್ದವು. ನಾಸಿರ ಹುಸೇನ್ ಜಿಂದಾಬಾದ್, ನಾಸಿರ್ ಖಾನ್ ಜಿಂದಾಬಾದ್, ಕಾಂಗ್ರೆಸ್ ಪಾರ್ಟಿ ಜಿಂದಾಬಾಂದ್ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಿದ್ದರು. ಕೆಲ ಸಮಯದ ಬಳಿಕ ಮಾಧ್ಯಮದವರು ಕರೆ ಮಾಡಿ, ನಿಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿದರು.
ಆದರೆ ನಾನು ಆ ಸ್ಥಳದಲ್ಲಿದ್ದಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಲ್ಲ. ಈಗಾಗಲೆ ನಾನು ಪೊಲೀಸರ ಬಳಿ ಮಾಹಿತಿ ಪಡೆದಿದ್ದೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ಯಾರಾದರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೇ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಘೋಷಣೆ ಕೂಗಿದ್ದು ಸತ್ಯವಾಗಿದ್ದರೇ, ಆ ವ್ಯಕ್ತಿ ವಿಧಾನಸೌಧ ಒಳಗೆ ಹೇಗೆ ಬಂದನು? ಯಾಕೆ ಬಂದನು? ಎಂಬ ಎಲ್ಲದರ ಕುರಿತು ಸಮಗ್ರ ತನಿಖೆಯಾಗುತ್ತದೆ. ಒಂದು ವೇಳೆ ಯಾರಾದರು ವಿಡಿಯೋವನ್ನು ತಿರುಚಿ, ಸುಳ್ಳು ಸುದ್ದಿ ಅಬ್ಬಿಸಿದ್ದರೆ ಅವರ ವಿರುದ್ಧವೂ ತನಿಖೆಯಾಗಲಿದೆ. ತನಿಖಾ ವರದಿ ಎಲ್ಲವೂ ಬಹಿರಂಗಗೊಳ್ಳಲಿದೆ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.