ಡೈಲಿ ವಾರ್ತೆ: 05/Mar/2024
ಮಂಗಳೂರು ಆಸಿಡ್ ದಾಳಿ ಪ್ರಕರಣ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆಸ್ಪತ್ರೆಗೆ ಭೇಟಿ, ಬಾಲಕಿಯರಿಗೆ ತಲಾ 4 ಲಕ್ಷ ಪರಿಹಾರ ಘೋಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿ ಸರಕಾರಿ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಕುರಿತಂತೆ ಇದೀಗ ವಿದ್ಯಾರ್ಥಿನಿಯರು ದಾಖಲಾಗಿರುವ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದಾರೆ.
ಸಂತ್ರಸ್ತ ವಿದ್ಯಾರ್ಥಿನಿಯರು ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಡಾ.ನಾಗಲಕ್ಷ್ಮೀ ಭೇಟಿ ನೀಡಿ ವಿದ್ಯಾರ್ಥಿನಿಯರು ಆರೋಗ್ಯ ವಿಚಾರಣೆ ಮಾಡಿದ್ದಾರೆ. ಹಾಗೂ ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ.
ಸಂತ್ರಸ್ತ ಯುವತಿಯರು ಭಾವುಕರಾಗಿ ನನ್ನಲ್ಲಿ ಮಾತನಾಡಿದ್ದು, ಪರೀಕ್ಷೆ ಬಗ್ಗೆ ಕೇಳ್ತಾ ಇದ್ರು. ನಾನೂ ಒಬ್ಬಳು ತಾಯಿ. ನನಗೂ ಅವರ ಮಾನಸಿಕ ಸ್ಥಿತಿಗತಿ ಅರ್ಥ ಆಗುತ್ತದೆ. ಶಿಕ್ಷಣ ಸಚಿವರನ್ನು ಭೇಟಿಯಾಗುವೆ ಇಂದು, ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇನೆ. ಸರಕಾರ ಪೊಲೀಸ್ ಇಲಾಖೆಯಿಂದ ಏನೇನು ಪರಿಹಾರ ಬೇಕೋ ಅದನ್ನು ಕೊಡಿಸುತ್ತೇನೆ. ಎರಡು ವಾರದ ನಂತರ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗುತ್ತದೆ. ತಕ್ಷಣ ಪರಿಹಾರವಾಗಿ ತಲಾ ನಾಲ್ಕು ಲಕ್ಷ ಸರಕಾರದಿಂದ ಕೊಡಿಸುತ್ತೇನೆ. ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ವ್ಯವಸ್ಥೆ ಮಾಡುತ್ತೇವೆ ಎಂದು ಆಸಿಡ್ ಸಂತ್ರಸ್ತರನ್ನು ಭೇಟಿ ಮಾಡಿದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.