
ಡೈಲಿ ವಾರ್ತೆ: ಫೆ./04/2026
ಕರಾವಳಿ ರೈಲ್ವೆ ಅಭಿವೃದ್ಧಿಗೆ ಕೇಂದ್ರದ ಬಾಗಿಲು ತಟ್ಟಿದ ಸಂಸದ ಕೋಟ ಶ್ರೀನಿವಾಸ್ ಪೂಜಾರಿ: ವಂದೇ ಭಾರತ್ ವಿಸ್ತರಣೆ – ಕೊಂಕಣ ದ್ವಿಪಥಕ್ಕೆ ಸಂಸದ ಕೋಟ ಬಲವಾದ ಮನವಿ

ನವದೆಹಲಿ, ಫೆ. 4: ಕರ್ನಾಟಕದ ಕರಾವಳಿ ಭಾಗದ ರೈಲ್ವೆ ಸಂಪರ್ಕವನ್ನು ಮತ್ತಷ್ಟು ಬಲಪಡಿಸಿ, ದೀರ್ಘಕಾಲದಿಂದ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು. ವಿಶೇಷವಾಗಿ ಬೆಂಗಳೂರಿನಿಂದ ಮಂಗಳೂರು–ಉಡುಪಿ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯವರೆಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಸ್ತರಣೆ ಮಾಡುವಂತೆ ಮನವಿ ಮಾಡಿದರು.
ಕರಾವಳಿ ಜಿಲ್ಲೆಗಳಿಂದ ಪ್ರತಿದಿನ 600ಕ್ಕೂ ಅಧಿಕ ಖಾಸಗಿ ಬಸ್‌ಗಳು ಬೆಂಗಳೂರಿಗೆ ಸಂಚರಿಸುತ್ತಿದ್ದು, ರೈಲ್ವೆ ಸೌಲಭ್ಯಗಳ ವಿಸ್ತರಣೆ ನಡೆದಲ್ಲಿ ಸಾವಿರಾರು ನಿತ್ಯ ಪ್ರಯಾಣಿಕರಿಗೆ ಮಹತ್ತರ ಅನುಕೂಲವಾಗಲಿದೆ ಎಂದು ಸಂಸದರು ವಿವರಿಸಿದರು.
ಅದೇ ರೀತಿ, ಮಂಗಳೂರು–ಮುಂಬೈ ನಡುವಿನ 734 ಕಿ.ಮೀ. ಕೊಂಕಣ ರೈಲ್ವೆ ಹಳಿಯನ್ನು ದ್ವಿಪಥಗೊಳಿಸುವ ಯೋಜನೆಗೆ ತ್ವರಿತವಾಗಿ ಸರ್ವೆ ನಡೆಸಿ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದರು. ಹಳಿ ದ್ವಿಪಥವಾದಲ್ಲಿ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ದೊರೆಯಲಿದ್ದು, ಕರಾವಳಿ ಭಾಗದ ಆರ್ಥಿಕ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.
ಕಳೆದ ಹಲವು ವರ್ಷಗಳಿಂದ ಕರಾವಳಿ ಪ್ರದೇಶದಲ್ಲಿ ಕಂಡುಬಂದಿರುವ ರೈಲ್ವೆ ಸೇವೆಗಳ ಕೊರತೆಗಳನ್ನು ನಿವಾರಿಸಲು ಮೋದಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಉಲ್ಲೇಖಿಸಿದ ಅವರು, ಈ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಹೊಸ ರೈಲು ಸೇವೆಗಳ ಅಗತ್ಯವಿದೆ ಎಂದು ಮನವಿ ಸಲ್ಲಿಸಿದರು.
ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಾಂತ್ರಿಕ ವರದಿಗಳ ಆಧಾರದ ಮೇಲೆ ಬೇಡಿಕೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.