ಡೈಲಿ ವಾರ್ತೆ: 07/Mar/2024
ಉಡುಪಿ ಶಾಸಕ ಬಾವಚಿತ್ರಕ್ಕೆ ಉಗುಳುವ ಬದಲು ಅಭಿವೃದ್ಧಿ ಕಡೆ ಗಮನ ನೀಡಲಿ : ರಮೇಶ್ ಕಾಂಚನ್
ಉಡುಪಿ: ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಮಕ್ಕಳಾಟಿಕೆ ಸ್ವಭಾವವನ್ನು ಕೈಬಿಟ್ಟು ಉಡುಪಿ ಕ್ಷೇತ್ರದ ಜನರು ತನಗೆ ಮತ ನೀಡಿರುವುದು ಕ್ಷೇತ್ರದ ಅಭಿವೃದ್ಧಿ ಮಾಡಲು ಎನ್ನುವುದುನ್ನು ಅರಿತು ಅದರ ಕಡೆಗೆ ಗಮನ ಹರಿಸುವುದು ಉತ್ತಮ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಸಲಹೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ ಆದರೆ ಪ್ರತಿಭಟನೆಯ ಹೆಸರಿನಲ್ಲಿ ಪ್ರಚೋದನೆಗೆ ಅವಕಾಶ ನೀಡುವುದು ತಪ್ಪು. ಹಿರಿಯ ಸಾಮಾಜಿಕ ಕಾರ್ಯಕರ್ತರಾದ ಎಂ.ಜಿ ಹೆಗ್ಡೆ ಅವರ ಹೇಳಿಕೆಯನ್ನು ಪ್ರತಿಭಟಿಸುವ ಭರದಲ್ಲಿ ಅವರ ಭಾವಚಿತ್ರಕ್ಕೆ ಉಗುಳುವಂತಹ ಸಣ್ಣತನ ಒರ್ವ ಶಾಸಕರಾಗಿ ತೋರಿರುವುದು ನಿಜಕ್ಕೂ ಅಸಹ್ಯವಾದುದು.
ಪ್ರತಿಯೊಬ್ಬರ ವಿಚಾರಧಾರೆಗಳು ಒಂದೇ ಆಗಿರಬೇಕು ಎನ್ನುವ ಮನಸ್ಥಿತಿ ಸರಿಯಲ್ಲ. ಇದು ಸಮಾಜಕ್ಕೆ ಮಾರಕವಾಗುತ್ತದೆ. ಶಾಸಕರು ತನ್ನ ಕ್ಷೇತ್ರದ ಪ್ರತಿಯೊಂದು ಧರ್ಮ, ಜಾತಿಯ ಜನರನ್ನು ಒಂದಾಗಿ ಕೊಂಡೊಯ್ಯುವ ಜವಾಬ್ದಾರಿಯನ್ನು ಹೊಂದಿದ್ದು ಎಂದಿಗೂ ಕೂಡ ಅವರ ವರ್ತನೆ ಬೇಲಿಯೇ ಎದ್ದು ಹೊಲ ಮೇಯುವ ರೀತಿ ಆಗಬಾರದು ಎನ್ನುವ ಕನಿಷ್ಠ ಜ್ಞಾನ ಅವರಿಗೆ ಇರಬೇಕು. ನಾಯಕನಾದವನು ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಬೇಕು, ಸಮಾಜಕ್ಕೆ ಮಾದರಿಯಾಗಬೇಕೇ ವಿನಃ ಅವರೇ ಪ್ರಚೋದನೆಗೆ ಅವಕಾಶ ನೀಡಿದರೆ ಇದರಿಂದ ಮುಂದೆ ನಮ್ಮ ಸಮಾಜದ ಯುವಜನತೆಯು ಹಿಂಸಾತ್ಮಕ ಹಾದಿಯನ್ನು ಹಿಡಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ರಮೇಶ್ ಕಾಂಚನ್ ಹೇಳಿದರು.