ಡೈಲಿ ವಾರ್ತೆ: 09/Mar/2024
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ; ಐದು ಗ್ಯಾರಂಟಿಗಳನ್ನು ಘೋಷಿಸಿದ ರಾಹುಲ್ ಗಾಂಧಿ
ದೇಶದಲ್ಲಿ 2024 ರ ಲೋಕಸಭಾ ಚುನಾವಣೆಯಿಂದಾಗಿ ಗ್ಯಾರಂಟಿಗಳು, ಭರವಸೆಗಳು, ಶಂಕುಸ್ಥಾಪನೆಗಳು ಜೋರಾಗಿಯೇ ನಡೆಯುತ್ತಿವೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕಾಂಗ್ರೆಸ್ ಪ್ರಣಾಳಿಕೆಯಿಂದ ವಿಶೇಷವಾಗಿ ಯುವಕರಿಗಾಗಿ ಐದು ಪ್ರಮುಖ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ.
ರಾಜಸ್ಥಾನದಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 30 ಲಕ್ಷ ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಎಲ್ಲಾ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪದವಿ / ಡಿಪ್ಲೋಮಾ ಹೊಂದಿರುವವರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಸ್ಟೈಫಂಡ್‌ನೊಂದಿಗೆ ಖಾತ್ರಿಪಡಿಸಿದ ಅಪ್ರೆಂಟಿಸ್‌ಶಿಪ್ ಅನ್ನು ನೀಡುತ್ತದೆ ಎಂದು ಭರವಸೆ ನೀಡಿದ್ದಾರೆ.
ಯುವಕರಿಗೆ ಕಾಂಗ್ರೆಸ್‌ನ 5 ಗ್ಯಾರಂಟಿಗಳು ಯಾವುವು?
ಭಾರತಿ ಭರೋಸಾ, ಪೆಹ್ಲಿ ನೌಕ್ರಿ ಪಕ್ಕಿ, ಪೇಪರ್ ಲೀಕ್ ಸೆ ಮುಕ್ತಿ, ಗಿಗ್ ಎಕಾನಮಿ ಮೇ ಸಮಾಜಿಕ್ ಸುರಕ್ಷಾ, ಯುವ ರೋಶನಿ ಎಂಬ ಐದು ಗ್ಯಾರಂಟಿಗಳನ್ನು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಈ ಐದು ಯೋಜನೆಗಳು ಏನು ಎಂಬುದನ್ನು ಇಲ್ಲಿ ವಿವರವಾಗಿ ನೀಡಲಾಗಿದೆ.
* ಭಾರತಿ ಭರೋಸಾ (ಉದ್ಯೋಗ ಖಾತ್ರಿ): ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ಕಾಲಮಿತಿಯಲ್ಲಿ ಭರ್ತಿ ಮಾಡಲಿದೆ. ಪರೀಕ್ಷೆಯ ದಿನಾಂಕದಿಂದ ನೇಮಕಾತಿಯವರೆಗೆ ಸ್ಪಷ್ಟವಾದ ಟೈಮ್‌ಲೈನ್ ಇರುತ್ತದೆ.
* ಪೆಹ್ಲಿ ನೌಕ್ರಿ ಪಕ್ಕಿ (ಮೊದಲ ಉದ್ಯೋಗ ಖಾತ್ರಿ): 24 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಬ್ಬ ಪದವಿ ಅಥವಾ ಡಿಪ್ಲೊಮಾ ಹೊಂದಿರುವವರು ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಪಡೆಯುವ ಹಕ್ಕು ಅಪ್ರೆಂಟಿಸ್‌ಶಿಪ್‌ಗಾಗಿ ಕಾನೂನನ್ನು ಕಾಂಗ್ರೆಸ್ ತರಲಿದೆ. ಈ ಯೋಜನೆ ಅಡಿಯಲ್ಲಿ ಸ್ಟೈಫಂಡ್ ತಿಂಗಳಿಗೆ 8,500 ಮತ್ತು ವರ್ಷಕ್ಕೆ 1 ಲಕ್ಷ ಇರುತ್ತದೆ.
ನಾವು ಈ ಹಿಂದೆ ನರೇಗಾ (MNREGA) ಯೋಜನೆ ತಂದಿದ್ದೇವೆ ಅದು ಲಕ್ಷಾಂತರ ಜನರಿಗೆ ಪ್ರಯೋಜನ ನೀಡುತ್ತಿದೆ. ಈಗ ಪೆಹ್ಲಿ ನೌಕ್ರಿ ಪಕ್ಕಿ ಎಂಬ ಯೋಜನೆ ಕೂಡ ಅಂತಹದ್ದೇ ಯೋಜನೆಯಾಗಲಿದೆ” ಎಂದು ರಾಹುಲ್ ಗಾಂಧಿ ರಾಜಸ್ಥಾನದಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.
* ಪೇಪರ್ ಲೀಕ್ ಸೆ ಮುಕ್ತಿ (ಪ್ರಶ್ನೆಪತ್ರಿಕೆಯ ಸೋರಿಕೆ ತಡೆ): ಸರ್ಕಾರಿ ಉದ್ಯೋಗದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ತಡೆಯಲು ಕಾಂಗ್ರೆಸ್ ಕಾನೂನನ್ನು ತರಲಿದೆ. ಪೇಪರ್ ಲೀಕ್ ಆಗಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.
* ಗಿಗ್ ಎಕಾನಮಿ ಮೇ ಸಮಾಜಿಕ್ ಸುರಕ್ಷಾ (ಗುತ್ತಿಗೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆ): ಉತ್ತಮ ಕೆಲಸದ ಪರಿಸ್ಥಿತಿಗಳು ಮತ್ತು ಗುತ್ತಿಗೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆಗಾಗಿ ಹೊಸ ಕಾನೂನುಗಳು ಕಾಂಗ್ರೆಸ್ ತರಲಿದೆ. ಟ್ರಕ್ ಚಾಲಕರು, ಮೆಕ್ಯಾನಿಕ್‌ಗಳು, ಕಾರ್ಪೆಂಟರ್‌ಗಳು, ಡೆಲಿವರಿ ಮಾಡುವವರು, ಟ್ಯಾಕ್ಸಿ ಡ್ರೈವರ್‌ಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಿ ಅವರ ಕಷ್ಟಗಳನ್ನು ಆಲಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
“ನಾವು ರಾಜಸ್ಥಾನದಲ್ಲಿ ಗಿಗ್ ಕೆಲಸಗಾರರಿಗಾಗಿ ಕಾನೂನನ್ನು ತಂದಿದ್ದೇವೆ. ಇದನ್ನು ಈ ಬಾರಿ ದೇಶದಾದ್ಯಂತ ತರಲಿದ್ದೇವೆ. ಈ ಗಿಗ್ ಕಾರ್ಯಕರ್ತರು ಪಿಂಚಣಿ ಪಡೆಯಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.
* ಯುವ ರೋಶನಿ: ಪ್ರತಿ ಜಿಲ್ಲೆಯಾದ್ಯಂತ 5,000 ಕೋಟಿ ರೂಪಾಯಿಯ ರಾಷ್ಟ್ರೀಯ ನಿಧಿಯನ್ನು ಯುವಕರ ಸ್ಟಾರ್ಟ್‌ಅಪ್‌ಗಳಿಗಾಗಿ ಆರಂಭಿಕ ನಿಧಿಯಾಗಿ ಇಡಲಾಗುವುದು. 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಈ ಫಂಡ್‌ನ ಪ್ರಯೋಜನವನ್ನು ಪಡೆಯಬಹುದು.