ಡೈಲಿ ವಾರ್ತೆ: 10/Mar/2024

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ – ₹15 ಕೋಟಿ ಮೌಲ್ಯದ 1600 ಕೆಜಿ ದಾಖಲೆ ಪ್ರಮಾಣದ ಗಾಂಜಾ ವಶಕ್ಕೆ.!

ಬೀದರ್: ಎನ್‌ಸಿಬಿ ಅಧಿಕಾರಿಗಳು (NCB Police) ಭರ್ಜರಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿಗೆ ಬರುತ್ತಿದ್ದ ಬರೋಬ್ಬರಿ 1,596 ಕೆಜಿ ಗಾಂಜಾವನ್ನ ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಆಂಧ್ರ ಪ್ರದೇಶದಿಂದ ಬರ್ತಿದ್ದ ಗಾಂಜಾ ತುಂಬಿದ್ದ ಲಾರಿಯನ್ನು ಸೀಜ್ ಮಾಡಿದ್ದು, ಇಬ್ಬರನ್ನ ಬಂಧಿಸಿ ವಿಚಾರಣೆ ನಡೆಸ್ತಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಒಂದೇ ರೇಡ್ನಲ್ಲಿ 1596 ಕೆಜಿ ಗಾಂಜಾ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಬರೋಬ್ಬರಿ 15 ಕೋಟಿ 50 ಲಕ್ಷ ಮೌಲ್ಯವನ್ನು ಹೊಂದಿದೆ. ಆಂಧ್ರ ಪ್ರದೇಶದಿಂದ ಬೀದರ್‌ ಮೂಲಕ ಮಹಾರಾಷ್ಟ್ರಕ್ಕೆ ಖದೀಮರು ಗಾಂಜಾ ಸಾಗಿಸುತ್ತಿದ್ದರು. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಳ್ಳಿ ಚೆಕ್ ಪೋಸ್ಟ್ ಬಳಿ ಪೊಲೀಸರು ದಾಳಿ ನಡೆಸಿ ಗಾಂಜಾ ಪ್ಯಾಕೆಟ್ಗಳನ್ನು ಸೀಜ್ ಮಾಡಿದ್ದಾರೆ.

ಘಟನೆ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೀದರ್ ಎಸ್ಪಿ ಚನ್ನಬಸವಣ್ಣ ಲಂಗೋಟಿ, NCB ಪೊಲೀಸರ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸರಿಂದ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪ್ಪಹಳ್ಳಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಲಾಗಿದೆ. ಸಂಶಯಾಸ್ಪದವಾಗಿ ಕಂಡು ಬಂದ ಲಾರಿ ಪರಿಶೀಲಿಸಿದಾಗ ದೊಡ್ಡ ಪ್ರಮಾಣದಲ್ಲಿ ಗಾಂಜಾ ಪತ್ತೆಯಾಗಿದೆ. ಬರೋಬ್ಬರಿ 15 ಕೋಟಿ ರೂ. ಅಧಿಕ ಮೌಲ್ಯದ 1596 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.