ಡೈಲಿ ವಾರ್ತೆ: 10/Mar/2024
ಮಾಣಿ ಬಾಲವಿಕಾಸದಲ್ಲಿ “ಮಡಿಲು – ವಿಕಾಸದ ಕಡಲು 23-24” ಬೀಳ್ಕೊಡುಗೆ ಸಮಾರಂಭ
ಬಂಟ್ವಾಳ : ಮಾಣಿ ಪೆರಾಜೆಯ ವಿದ್ಯಾನಗರ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ 2023-24 ನೇ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮಡಿಲು 23-24- ವಿಕಾಸದ ಕಡಲು ಎಂಬ ಹೆಸರಿನಲ್ಲಿ ಬೀಳ್ಕೊಡುಗೆ ಸಮಾರಂಭವು ಬಾಲವಿಕಾಸ ಆಡಿಟೋರಿಯಂ ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಗ್ ಬಾಸ್ ಖ್ಯಾತಿಯ ಧ್ವನಿ ಮಾಂತ್ರಿಕ ಬಡೆಕ್ಕಿಲ ಪ್ರದೀಪ್ ಹತ್ತನೇ ತರಗತಿಯ ವಿದ್ಯಾರ್ಥಿಗಳು ಸಂಸ್ಥೆಗೆ ಕೊಡುಗೆಯಾಗಿ ನೀಡಿದ ಡಿಜಿಟಲ್ ಪೋಡಿಯಮ್ ನ್ನು ತನ್ನ ಅದ್ಭುತ ಧ್ವನಿಯಿಂದ ಉದ್ಘಾಟಿಸಿ, “ಜೀವನದಲ್ಲಿ ಮುಂದಕ್ಕೆ ಹೋದ ಹಾಗೆ ಹೊಸ-ಹೊಸ ಸವಾಲುಗಳು ಎದುರಾಗಬಹುದು. ನಮ್ಮಲ್ಲಿ ನಾವು ಪ್ರತಿದಿನ ಪ್ರೇರಣೆ ತುಂಬಿಕೊಂಡಾಗ ಸಾಧನೆಯ ಹಾದಿ ಸುಲಭವಾಗುತ್ತದೆ. ಮಾಣಿಯಂತಹ ಹಳ್ಳಿ ಪ್ರದೇಶದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಶಾಲಾ ಪರಿಸರವನ್ನು ನಿರ್ಮಾಣ ಮಾಡಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿ, ಇಲ್ಲಿ ಕಲಿತು ಹೊರಹೋಗುವ ವಿದ್ಯಾರ್ಥಿಗಳು ಸಂಸ್ಥೆಯ ಹೆಸರನ್ನು ಉಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಬೇಕು, ಸಂಸ್ಥೆಯನ್ನು ಪ್ರಜ್ವಲಿಸುವ ಹಾಗೆ ಮಾಡಬೇಕು” ಎಂದರು.
ಪ್ರದೀಪ್ ತನ್ನ ವಿಶೇಷ ಸ್ವರ ಸಂಯೋಜನೆಯಲ್ಲಿ ಬಿಗ್ ಬಾಸ್, ನಮ್ಮ ಮೆಟ್ರೋ, ಕರಿಮಣಿ ಧಾರಾವಾಹಿಗೆ ನೀಡಿದ ಹಿನ್ನೆಲೆ ಧ್ವನಿಯನ್ನು ಹಂಚಿಕೊಂಡು ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ ಮಾತನಾಡಿ, ” ಕಲಿತ ಸಂಸ್ಥೆಯನ್ನು ನೆನಪಿಟ್ಟುಕೊಳ್ಳುವಂತಹ ಮಕ್ಕಳು ಖಂಡಿತವಾಗಿಯೂ ಅವರ ತಂದೆ-ತಾಯಿಯ ತ್ಯಾಗವನ್ನು ನೆನಪಿಟ್ಟುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಭಾವೀ ಬದುಕಿಗೆ ಬೇಕಾದ ಜೀವನ ಮೌಲ್ಯಗಳನ್ನು ಬೆಳೆಸುವಂತಹ ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಕಾಲೇಜು ಶಿಕ್ಷಣಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಕು. ಕಲಿತಂತಹ ಸಂಸ್ಥೆಯೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು
ಎಂದರು .
ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಉಪ ಮುಖ್ಯ ಶಿಕ್ಷಕಿ ಮೋಹಿನಿ ಎ. ರೈ, ಸಹ ಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಉಪಸ್ಥಿತರಿದ್ದರು.
ಶಾಲೆಯ 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ನಿವ್ಯಾ ರೈ, ವೃದ್ದಿ ಕೊಂಡೆ, ಸುಜನ್ ಡಿ ಕಾಮತ್, ಮುಹಮ್ಮದ್ ಅಜ್ಮಲ್ ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಬಾಲವಿಕಾಸದಲ್ಲಿ ಕಳೆದ ನೆನಪುಗಳನ್ನು ಹಾಡು, ಕವನ, ವಿಡಿಯೋ ಚಿತ್ರೀಕರಣ, ಕೊಳಲು ವಾದನದ ಮೂಲಕ ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವರ ಬ್ಯಾಚ್ ನ ಭಾವಚಿತ್ರವನ್ನು ಸ್ಮರಣಿಕೆಯಾಗಿ ಕೊಡುವ ಮೂಲಕ ಅವರ ಹೆತ್ತವರೊಂದಿಗೆ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ವಿದ್ಯಾರ್ಥಿನಿಯರಾದ ಸಾನ್ವಿ ರೈ ಸ್ವಾಗತಿಸಿ, ನಿಧಿಶ ವಂದಿಸಿದರು. ವೈಷ್ಣವಿ ಮತ್ತು ಸಾಕ್ಷಿ ಕಾರ್ಯಕ್ರಮ ನಿರೂಪಿಸಿದರು.