ಡೈಲಿ ವಾರ್ತೆ: 16/Mar/2024

ಕೋಟಿ ಕೋಟಿ ತೆರಿಗೆ ಬಾಕಿ: ಬೆಳ್ಳಂಬೆಳಗ್ಗೆ ಮಂತ್ರಿಮಾಲ್ಗೆ ಶಾಕ್, ಬೀಗ ಜಡಿದು ಲೈಸೆನ್ಸ್ ಕ್ಯಾನ್ಸಲ್ ಮಾಡಿದ ಬಿಬಿಎಂಪಿ!

ಬೆಂಗಳೂರು: ಕೋಟಿ ಕೋಟಿ ರೂಪಾಯಿ ತೆರಿಗೆ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ಗೆ ಬೀಗ ಜಡಿದಿದ್ದಾರೆ.

ಸುಮಾರು 32 ಕೋಟಿ ವರೆಗೂ ಮಂತ್ರಿ ಮಾಲ್ ತೆರಿಗೆ ಪಾವತಿ ಉಳಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಕೂಡ ಅನೇಕ ಬಾರಿ ತೆರಿಗೆ ವಿಚಾರವಾಗಿ ಮಾಲ್ ಗೆ ಬೀಗ ಹಾಕಲಾಗಿತ್ತು. ಇದೀಗ ಮತ್ತೆ ಇಂದು ಮಾಲ್ ಗೆ ಬೀಗ ಹಾಕಲಾಗಿದ್ದು, ಮುಖ್ಯ ಪ್ರವೇಶ ದ್ವಾರಕ್ಕೆ ಅಧಿಕಾರಿಗಳು ಬೀಗ ಜಡಿದು, ಶಾಕ್ ನೀಡಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಮಾರ್ಷಲ್ ಹಾಗೂ ಪೊಲೀಸರ ಬಿಗಿ ಭದ್ರತೆಯಲ್ಲಿ ಮಾಲ್ ಗೆ ಬೀಗ ಹಾಕಿದ್ದಾರೆ.

ಮಾಲ್ನ ಮುಖ್ಯ ದ್ವಾರಕ್ಕೆ ಬೀಗ ಹಾಕುವುದರೊಂದಿಗೆ ನೋಟಿಸ್ ಕೂಡ ಅಂಟಿಸಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆಯಂತೆ, ನಿಮ್ಮ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಬಿಬಿಎಂಪಿ ಆದೇಶ ಮೇರೆಗೆ ಬಾಕಿ ಆಸ್ತಿ ತೆರಿಗೆಗಳನ್ನು ಪಾವತಿಸದ ಕಾರಣಕ್ಕಾಗಿ ಆಸ್ತಿಯನ್ನು ಸೀಲ್ ಮಾಡಲಾಗಿದೆ ಎಂದು ಬ್ಯಾನರ್ ಅಳಡಿಸಲಾಗಿದೆ.

ಈ ನಡುವೆ ಎಂದಿನಂತೆ ಕೆಲಸಕ್ಕೆ ಬಂದ ಬಟ್ಟೆ, ಸೂಪರ್ ಮಾರ್ಕೆಟ್, ಮೇಕ್ ಅಪ್ ಸೇರಿ ಮಾಲ್ ಒಳಗಿರುವ ಹಲವು ಮಳಿಗೆಗಳ ಸಿಬ್ಬಂದಿ ಕಂಗಲಾಗಿದ್ದು ಕಂಡು ಬಂದಿತು.