ಡೈಲಿ ವಾರ್ತೆ: 17/Mar/2024
ಲೋಕಸಭೆ ಚುನಾವಣೆ: ಬೆಳಗಾವಿಯಲ್ಲಿ 2 ಲಕ್ಷ ರೂ. ಜಪ್ತಿ: ರಾಮನಗರದಲ್ಲಿ ಕುಕ್ಕರ್, ತವಾ ಹಂಚಿಕೆ ಆರೋಪ
ಬೆಳಗಾವಿ: ಬೇಸಿಗೆ ಬಿಸಿಲು ಏರುತ್ತಿದ್ದಂತೆ. ಲೋಕಸಭೆ ಕಣದ ಕಾವು ರಣ ರಣ ರಂಗೇರುತ್ತಿದೆ. ಈ ವೇಳೆ ಕೇಂದ್ರ ಚುನಾವಣಾ ಆಯೋಗ ಇಂದು ಲೋಕಸಭಾ ಚುನಾವಣೆ ದಿನಾಂಕವನ್ನು ಘೋಷಿಸಿದೆ. ಆ ಮೂಲಕ ಇಡೀ ದೇಶವೇ ಎದುರು ನೋಡುತ್ತಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಮತದಾನ ನಡೆಯಲಿದೆ. ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ ಬೆಳಗಾವಿ ಪೊಲೀಸರು ಹೈಅಲರ್ಟ್ ಆಗಿದ್ದು, ದಾಖಲೆ ಇಲ್ಲದೇ ಗೋಣಿ ಚೀಲದಲ್ಲಿ ಸಾಗಿಸುತ್ತಿದ್ದ 2 ಲಕ್ಷ ರೂ. ಹಣವನ್ನು ಜಪ್ತಿ ಮಾಡಿದ್ದಾರೆ.
ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಚೆಕ್ಪೋಸ್ಟ್ನಲ್ಲಿ ಘಟನೆ ನಡೆದಿದ್ದು, 1 ಆಲ್ಟೋ ಕಾರು ಸೇರಿದಂತೆ ನಾಲ್ವರು ಆರೋಪಿಗಳನ್ನು ಮೂಡಲಗಿ ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ.
ಚುನಾವಣೆ ಘೋಷಣೆ ಬೆನ್ನಲ್ಲೆ ಬೆಳಗಾವಿ ಜಿಲ್ಲಾ ಚುನಾವಣಾ ಅಧಿಕಾರಿ ನಿತೇಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ ಚುನಾವಣೆ, ಮತದಾರರು, ಮತಗಟ್ಟೆ ವಿವರ ನೀಡಿದ್ದಾರೆ. ಚುನಾವಣೆ ವೇಳೆ ಅಕ್ರಮಗಳನ್ನ ತಡೆಯಲು ಒಟ್ಟು 64 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದಾರೆ.
ರಾಮನಗರ: ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಮರಳವಾಡಿ ಗ್ರಾಮದಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಕುಕ್ಕರ್, ತವಾ ಹಂಚಿಕೆ ಆರೋಪ ಕೇಳಿಬಂದಿದೆ. ಜೆಡಿಎಸ್ ಕಾರ್ಯಕರ್ತರಿಂದ ಹಾರೋಹಳ್ಳಿ ತಹಶೀಲ್ದಾರ್ಗೆ ದೂರು ನೀಡಲಾಗಿದೆ.
ಕುಕ್ಕರ್ಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸಂಸದ ಡಿ.ಕೆ.ಸುರೇಶ್, ಶಾಸಕ ಇಕ್ಬಾಲ್ ಹುಸೇನ್ ಭಾವಚಿತ್ರದ ಜೊತೆಗೆ ಹೊಸ ವರ್ಷದ ಶುಭಾಶಯದ ಪೋಸ್ಟರ್ ಇದೆ. ಸಂಜೆ ವೇಳೆ ಕುಕ್ಕರ್ ಹಂಚುತ್ತಿದ್ದರೆಂದು ಜೆಡಿಎದ್ ಕಾರ್ಯಕರ್ತರು ತಹಶೀಲ್ದಾರ್ಗೆ ಕರೆ ಮಾಡಿ ದೂರು ಕೊಟ್ಟರೂ ಭೇಟಿ ನೀಡದ ಆರೋಪ ಮಾಡಲಾಗಿದೆ.