ಡೈಲಿ ವಾರ್ತೆ: 17/Mar/2024
ಸಾಹೇಬ್ರಕಟ್ಟೆ ಸಹಕಾರಿ ಸಿರಿ ಪ್ರಧಾನ ಕಚೇರಿಯ ನೂತನ ಕಟ್ಟಡ ಲೋಕಾರ್ಪಣೆ – ಭಾಷೆ, ಸಂಸ್ಕೃತಿ ತಿಳಿದು ರೈತರ ಕಷ್ಟ ಸುಖಗಳಿಗೆ ಸ್ಪಂದಿಸುವ ಸಹಕಾರಿ ಕ್ಷೇತ್ರ – ಡಾ. ಎಂ. ಎನ್. ರಾಜೇಂದ್ರ ಕುಮಾರ್
ಕೋಟ :ವಾಣಿಜ್ಯ ಬ್ಯಾಂಕ್‌ಗಳಲ್ಲಿ ಭಾಷೆ, ಸಂಸ್ಕೃತಿ ತಿಳಿಯದವರೇ ಇದ್ದು, ಸೇವೆಯನ್ನು ಕಡಿಮೆ ನೀಡುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ, ಆದರೆ ಸಹಕಾರಿ ಕ್ಷೇತ್ರದಲ್ಲಿರುವವರು ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ, ಭಾಷೆ ಮತ್ತು ಸಂಸ್ಕೃತಿಯನ್ನು ತಿಳಿದು ರೈತರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ ಎಂದು ಎಸ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಸಾಹೇಬ್ರಕಟ್ಟೆಯಲ್ಲಿ ಭಾನುವಾರ ಅವರು ಶಿರಿಯಾರ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರಾವಳಿಯ ಸಹಕಾರಿ ಕ್ಷೇತ್ರ ಕಳೆದ 29 ವರ್ಷಗಳಲ್ಲಿ ಕೃಷಿ ಸಾಲ ನೀಡಿ ಶೇ. 100 ಮರುಪಾವತಿ ಮಾಡಿರುವುದು ವಿಶೇಷವಾಗಿದೆ. ರೈತರಿಗೋಸ್ಕರ ಇರುವ ಸಂಸ್ಥೆ ಇದು ಎಂದ ಅವರು ಸಹಕಾರಿ ಕ್ಷೇತ್ರದ ಎಲ್ಲ ಲಾಭವನ್ನು ಪಡೆಯುತ್ತಿರುವ ಸರ್ಕಾರ, ತನ್ನ ಸೇವೆಗೆ ಬಳಸಿಕೊಂಡು, ತನ್ನ ಹಣಕಾಸು ವ್ಯವಹಾರವನ್ನು ಕೇವಲ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ಮಾಡುತ್ತಿರುವುದು ವಿಷಾಧನೀಯ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಪ್ರದಾನ ಕಚೇರಿ ಉದ್ಘಾಟಿಸಿ ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿರಬೇಕು. ರೈತರಿಗಾಗಿ ಹಲವು ಸೌಲಭ್ಯಗಳು, ಯೋಜನೆಗಳನ್ನು ಸಹಕಾರಿ ಸಂಸ್ಥೆಗಳು ನೀಡುತ್ತಿರುವುದು ಶ್ಲಾಘನೀಯ ಎಂದರು. ವಾರಾಹಿ ಯೋಜನೆ ರೈತರ ಪರವಾಗಿತ್ತು. ಇಂದು ಉಡುಪಿಗೆ ಕುಡಿಯುವ ನೀರಿಗಾಗಿ ಯೋಜನೆ ಬದಲಾಗಿದೆ. ದಾರಿಯಲ್ಲಿ ಸಿಗುವ ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಶುದ್ಧ ನೀರನ್ನು ಒದಗಿಸುವುತ್ತಿರುವುದು ಒಳ್ಳೆಯದಾದರೂ ರೈತರನ್ನು ಕಡೆಗಣಿಸಬಾರದು ಎಂದು ಹೇಳಿದರು.
ಶಿರಿಯಾರ ವ್ಯ.ಸೇ.ಸ. ಅಧ್ಯಕ್ಷ ಬಿ. ಪ್ರದೀಪ್ ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನ ಪರಿಷತ್‌ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಹಕಾರಿ ಧುರೀಣ ಡಾ.ಐಕಳ ದೇವಿ ಪ್ರಸಾದ ಶೆಟ್ಟಿ ಬೆಳಪು, ಯಡ್ತಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಪ್ರಕಾಶ ಶೆಟ್ಟಿ, ವಡ್ಡರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲೋಕೇಶ ಶೆಟ್ಟಿ ಅಲ್ಸೆಬೆಟ್ಟು, ಶಿರಿಯಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಧೀಂದ್ರ ಶೆಟ್ಟಿ, ಸ್ಥಳ ದಾನಿಗಳಾದ ವೆಕಮ್ಮ, ಕಟ್ಟಡ ಸಮಿತಿ ಸದಸ್ಯ ಕೆ. ಉದಯಚಂದ್ರ ಶೆಟ್ಟಿ, ರವೀಂದ್ರನಾಥ ಶೆಟ್ಟಿ ಕೊಳ್ಕೆಬೈಲು, ಸಂಘದ ನಿರ್ದೇಶಕರು ಮತ್ತಿತರರು ಇದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಚಂದ್ರಶೇಖರ ಶೆಟ್ಟಿ ವರದಿ ವಾಚಿಸಿದರು. ನಿರ್ದೇಶಕ ಕೆ.ಸುರೇಂದ್ರ ಶೆಟ್ಟಿ ಸ್ವಾಗತಿಸಿದರು. ಅಧ್ಯಾಪಕ ಚಿತ್ರಪಾಡಿ ಸತೀಶ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.