ಡೈಲಿ ವಾರ್ತೆ: 21/Mar/2024
ಉಡುಪಿ: ಬೀದಿ ನಾಯಿಗೆ ಅನ್ನ ಹಾಕಿದ ದಲಿತ ಮಹಿಳೆಗೆ ಮಾರಣಾಂತಿಕ ಹಲ್ಲೆ – ಆರೋಪಿಯ ಬಂಧನ!
ಮಣಿಪಾಲ: ಉಡುಪಿ ತಾಲೂಕಿನ ಇಂದ್ರಾಳಿಯ ರೈಲ್ವೆ ಸ್ಟೇಷನ್ ರಸ್ತೆ ಪಕ್ಕದಲ್ಲಿ ದಲಿತ ಮಹಿಳೆಯೋರ್ವರು ಬೀದಿ ನಾಯಿಗೆ ಅನ್ನ ಹಾಕಿದಕ್ಕೆ ಸ್ಥಳೀಯ ವ್ಯಕ್ತಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಡೆದಿದೆ.
ಕಡು ಬಡವರಾದ ಬೇಬಿ ಎನ್ನುವ ದಲಿತ ಮಹಿಳೆಯು ಬೀದಿ ನಾಯಿಗಳಿಗೆ ಅನ್ನ ಹಾಕಿ ನಾಯಿಗಳ ಹಸಿವೆಯನ್ನು ನಿಗಿಸಿ ಮನುಷ್ಯತ್ವವನ್ನು ಮೆರೆದಿರುತ್ತಾರೆ.
ದಲಿತ ಮಹಿಳೆ ಹಾಗೂ ಅವರ ಎರಡು ಹೆಣ್ಣು ಮಕ್ಕಳ ಜೊತೆ ತುಂಬಾ ಬಡತನದಿಂದ ಕೂಡಿದ ಸಂಸಾರ ಇವರದ್ದಾಗಿದ್ದು ಪ್ರತಿ ದಿನ ನಾಯಿಗಳಿಗೆ ಅನ್ನ ಹಾಕುವ ರೂಡಿ ಇದೆ. ಅದರಂತೆ ನಿನ್ನೆ ದಿನವೂ ಅನ್ನ ಹಾಕುವ ಸಂದರ್ಭದಲ್ಲಿ ಇಂದ್ರಾಳಿ ರಸ್ತೆ ಎದುರು ಸಗ್ರಿ ಗ್ರಾಮದ ರಸ್ತೆ ಪಕ್ಕದ ಮೇಲ್ವರ್ಗದ ಚಂದ್ರಕಾಂತ ಭಟ್ಟ ಎನ್ನುವವರು ಬೀದಿ ನಾಯಿಗಳಿಗೆ ಅನ್ನ ಹಾಕಿದ ಕಾರಣಕ್ಕೆ ರೀಪಿನಿಂದ ತಲೆಗೆ ಮಾರಣಾಂತಿಕವಾಗಿ ಹೊಡೆದು ಹಲ್ಲೆ ಮಾಡಿರುತ್ತಾರೆ.
ಗಂಭೀರ ಗಾಯಗೊಂಡ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನಾ೯ಟಕ ದಲಿತ ಸಂಘರ್ಷ ಸಮಿತಿ (ರಿ) ಭೀಮವಾದ ವಿಭಾಗಿಯ ಸಂಚಾಲಕರು ವಿಶ್ವನಾಥ್ ಬೇಳ್ಳಂಪಳ್ಳಿ, ಜಿಲ್ಲಾ ಸಂಚಾಲಕರಾದ ರಾಜೇಶ್ ಕೆಳಾರ್ಕಳಬೆಟ್ಟು, ಚಂದ್ರಶೇಖರ್ ವಿಧ್ಯಾ , ಇನ್ನು ಹಲವಾರು ಕಾರ್ಯಕರ್ತರು ಸೇರಿ ಈ ಮಹಿಳೆಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಚಂದ್ರಕಾಂತ ಭಟ್ ನನ್ನು ಕೂಡಲೇ ಬಂಧಿಸಬೇಕು ಎಂದು ಠಾಣಾಧಿಕಾರಿಯವರಿಗೆ ಮನವಿ ಮಾಡಿದರು.
ಮಣಿಪಾಲ ಠಾಣಾಧಿಕಾರಿ ಕ್ಷಣಾರ್ಧದಲ್ಲಿಯೇ ಘಟನೆ ನಡೆದ ಸ್ಥಳಕ್ಕೆ ತನ್ನ ಸಿಬ್ಬಂದಿಗಳೊಂದಿಗೆ ಬಂದು ದಲಿತ ಮಹಿಳೆಗೆ ಹಲ್ಲೆ ಮಾಡಿದ ಆರೋಪಿ ಚಂದ್ರಕಾಂತ್ ಭಟ್ ನನ್ನು ಹುಡುಕಿ ಬಂಧಿಸಿರುತ್ತಾರೆ.
ದಲಿತ ಮಹಿಳೆಗೆ ಮಾರಣಾಂತಿಕ ಹಲ್ಲೆ- ದಸಂಸ ತೀವ್ರ ಖಂಡನೆ: ಸುದ್ದಿ ತಿಳಿದ ತಕ್ಷಣ ದ.ಸಂ.ಸ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ನೇತ್ರತ್ವದಲ್ಲಿ ದ.ಸಂ.ಸ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿದ್ದು, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಘಟನೆಯ ಮಾಹಿತಿ ಪಡೆದರು. ಈ ಹಲ್ಲೆಯನ್ನು ಉಗ್ರವಾಗಿ ಖಂಡಿಸಿದ ದಲಿತ ಸಂಘರ್ಷ ಸಮಿತಿಯು, ಆರೋಪಿಗೆ ಯಾವ ಕಾರಣಕ್ಕೂ ಜಾಮೀನು ಸಿಗಬಾರದು. ಮೇಲ್ವರ್ಗದವರ ಗೂಂಡಾಗಿರಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಈಗ ಉಡುಪಿಯ ಪೋಲಿಸ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು ದಲಿತರಿಗೆ ರಕ್ಷಣೆಯೇ ಇಲ್ಲವಾಗಿದೆ. ಆರೋಪಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ದ.ಸಂ.ಸ ಆಗ್ರಹಿಸಿದೆ.