ಡೈಲಿ ವಾರ್ತೆ: 22/Mar/2024
ಬೀಜಾಡಿ ಬೀಚ್ ಸ್ಟ್ರೈಕರ್ಸ್ ಕಡಲ ಮಕ್ಕಳ ಉತ್ಸವ – ಹೊಂಗಿರಣ
ಕುಂದಾಪುರ : ಸ್ಥಳೀಯ ಸಮಾನ ಮನಸ್ಕ ಉತ್ಸಾಹೀ ಯುವಕರ ಒಗ್ಗೂಡುವಿಕೆಯಿಂದ ಅಸ್ತಿತ್ವಕ್ಕೆ ಬಂದ ಬೀಜಾಡಿಯ ‘ಬೀಚ್ ಸ್ಟ್ರೈಕರ್ಸ್’ ಸಂಸ್ಥೆ ಅಲ್ಪಾವಧಿಯಲ್ಲೇ ದೊಡ್ಡ ಹೆಸರು ಮಾಡಿದೆ. ಸಂಸ್ಥೆಯು ಪರಿಸರ ರಕ್ಷಣೆ ಮತ್ತು ದುರ್ಬಲರ ಏಳಿಗೆಗೆ ಶ್ರಮಿಸುವುದರ ಮೂಲಕ ಜನಮಾನಸದಲ್ಲಿ ಬೇರೂರಿದೆ. ಈ ಸಂಸ್ಥೆಯ ಹೆಸರಲ್ಲೇ ರೂಪುತಳೆದ ‘ಬೀಚ್ ಸ್ಟ್ರೈಕರ್ಸ್ ಉದ್ಯಾನವನ’ ಕಡಲ ತಡಿಯ ಜನಾಕರ್ಷಕ ಕೇಂದ್ರವಾಗಿ ಬೆಳೆಯುತ್ತಿದೆ. ಈ ಯುವಪಡೆಗೆ ದಾನಿಗಳು, ಸಾರ್ವಜನಿಕರು ಇನ್ನಷ್ಟು ಬೆಂಬಲ ನೀಡಬೇಕು – ಎಂದು ಉದ್ಯಮಿ ದಿನಕರ ಶೆಟ್ಟಿ ಹೇಳಿದರು.
ಕೋಟೇಶ್ವರ ಸಮೀಪದ ಬೀಜಾಡಿಯ ಕಡಲ ಕಿನಾರೆಯ ಬೀಚ್ ಸ್ಟ್ರೈಕರ್ಸ್ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವದಂಗ ವಾಗಿ ಹಮ್ಮಿಕೊಂಡ ಕಡಲ ಮಕ್ಕಳ ಉತ್ಸವ ‘ ಹೊಂಗಿರಣ’ ಸಮಾರಂಭವನ್ನು ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಸಂಸ್ಥೆಯ ಇಂತಹ ಸಮಾಜಮುಖೀ ಕಾರ್ಯಗಳಿಗೆ ತಾನು ಸಹಾಯ ನೀಡುವುದಾಗಿ ಅವರು ಭರವಸೆ ನೀಡಿದರು.
ಬೀಚ್ ಸ್ಟ್ರೈಕರ್ಸ್ ಉದ್ಯಾನವನದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಲಾದ ಜಾರುಬಂಡಿಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ವರ್ಚುವಲ್ ಮೂಲಕ ಉದ್ಘಾಟಿಸಿ, ಬೀಚ್ ಸ್ಟ್ರೈಕರ್ಸ್ ಯುವಪಡೆ ಕಡಲ ತಡಿಯ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆ ಅರಿವು ಮೂಡಿಸುವಲ್ಲಿ ಇನ್ನಷ್ಟು ತೊಡಗಿಕೊಳ್ಳಲಿ ಎಂದು ಶುಭ ಕೋರಿದರು.
ಮುಖ್ಯ ಅತಿಥಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಭೋರ್ಗರೆವ ಕಡಲು ಎಲ್ಲರಿಗೂ ಚೆತೋಹಾರಿಯಾದ ಉತ್ಸಾಹವನ್ನು ತುಂಬುತ್ತದೆ. ಅಂತೆಯೇ ಕರಾವಳಿಯ ಕ್ರೀಡಾಪಟುಗಳೂ ಕಡಲಿನಿಂದ ಸ್ಫೂರ್ತಿ ಪಡೆದು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇಂತಹ ಕಡಲ ತಡಿಯನ್ನೇ ಸ್ವಚ್ಚ ಸುಂದರಗೊಳಿಸಿ ಸರ್ವ ಜನಾಕರ್ಷಕ ಕೇಂದ್ರವಾಗಿ ರೂಪಿಸಿದ ಬೀಚ್ ಸ್ಟ್ರೈಕರ್ಸ್ ಸಂಘಟನೆಯವರು ಅಭಿನಂದನಾರ್ಹರು ಎಂದರು.
ಶ್ರೀ ಕೋಟಿಲಿಂಗೇಶ್ವರ ದೇವಳ ಸಮಿತಿ ಸದಸ್ಯ ಸುರೇಶ್ ಶೇರಿಗಾರ್, ಮೊಗವೀರ ಸಂಘಟನೆಯ ಕೋಟೇಶ್ವರ ಘಟಕಾಧ್ಯಕ್ಷ ನಾಗರಾಜ ಬಿ., ಉದ್ಯಮಿ ರವೀಂದ್ರ ರಟ್ಟಾಡಿ ಮತ್ತು ಪತ್ರಕರ್ತೆ ಅಕ್ಷತಾ ಗಿರೀಶ್ ಶುಭ ಹಾರೈಸಿದರು.
ರಾಷ್ಟ್ರ ಮಟ್ಟದ ಕ್ರಿಕೆಟ್ ಆಟಗಾರ್ತಿ ತ್ರಿಷಾ ಐ. ನಾಯ್ಕ್ ಮತ್ತು ಸಮಾಜ ಸೇವಕ ಸೂರಿ ಬೀಜಾಡಿ ಇವರಿಗೆ ಹೊಂಗಿರಣ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಮೇಶ್ ಹೊದ್ರಾಳಿ ಮತ್ತು ರಘು ಮೊಗವೀರರಿಗೆ ವೈದ್ಯಕೀಯ ನೆರವು ಒದಗಿಸಲಾಯಿತು. ಪರಿಸರದ ಅಂಗನವಾಡಿಗಳಿಗೆ ಅಡಿಗೆ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ಬೀಚ್ ಸ್ಟ್ರೈಕರ್ಸ್ ಸಂಸ್ಥೆಯ ಅಧ್ಯಕ್ಷ ನವೀನ್ ಮೊಗವೀರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಅಭಿವೃದ್ಧಿಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಸದಸ್ಯರಾದ ಸಂದೀಪ್ ಮೊಗವೀರ ಮತ್ತು ಸಚಿನ್ ಕುಂದರ್ ರನ್ನು ಗೌರವಿಸಲಾಯಿತು. ಕೀರ್ತನ್ ಸ್ವಾಗತಿಸಿದರು. ಪುಂಡಲೀಕ ಮೊಗವೀರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಂಜುನಾಥ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ವಾರ್ಷಿಕೋತ್ಸವದಂಗ ವಾಗಿ ಗಾಳಿಪಟ ಉತ್ಸವ, ವೈವಿಧ್ಯಮಯ ಕಡಲ ತಡಿಯ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಂದಾಪ್ರ ಕನ್ನಡ ನಾಟಕ ನಡೆದವು.