ಡೈಲಿ ವಾರ್ತೆ: 24/Mar/2024
ಜಯಪ್ರಕಾಶ್ ಹೆಗ್ಡೆ- ಕೋಟ ಶ್ರೀನಿವಾಸ ಪೂಜಾರಿ ಮಧ್ಯೆ ‘ಭಾಷಾ ಸಮರ’ – 6 ತಿಂಗಳಲ್ಲಿ ಹಿಂದಿಯಲ್ಲೇ ಭಾಷಣ:ಕೋಟ,
ಭಾಷಾ ಜ್ಞಾನ ಟೀಕಿಸಿಲ್ಲ: ಜಯಪ್ರಕಾಶ್ ಹೆಗ್ಡೆ
ಬ್ರಹ್ಮಾವರ: ಸಂಸತ್ ಸದಸ್ಯರಾಗಿ ಆಯ್ಕೆಯಾದ ಬಳಿಕ ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳಲು ಹಿಂದಿ ಅಥವಾ ಇಂಗ್ಲಿಷ್ ಭಾಷೆಯ ಅರಿವಿರಬೇಕು ಎಂಬ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ. ಉಡುಪಿ ಹಾಗೂ ಚಿಕ್ಕಮಗಳೂರು ಕ್ಷೇತ್ರದ ಜನರಿಗೆ ನನ್ನ ಭಾಷೆಯ ತೊಡಕಿನ ಬಗ್ಗೆ ಆತಂಕ ಬೇಡ. ಸಂಸದನಾಗಿ ಆಯ್ಕೆಯಾದ 6 ತಿಂಗಳಲ್ಲಿ ಹಿಂದಿ ಭಾಷೆ ಕಲಿತು ಸದನದಲ್ಲಿ ಭಾಷಣ ಮಾಡುವ ಮೂಲಕ ಭಾಷೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಹಿರಿಯರು ಸಹಿತ ಕ್ಷೇತ್ರದ ಜನತೆಗೆ ಖುಷಿಯ ಸುದ್ದಿ ಕೊಡಲಿದ್ದೇನೆ’ ಎಂದು ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ:
ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸಿಲ್ಲ, ಕೇವಲವಾಗಿ ಮಾತನಾಡಿಲ್ಲ. ಭಾಷಾ ಜ್ಞಾನದ ಕುರಿತು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಕುರಿತು ಯಾವುದೇ ಮಾತು ಆಡಿಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.
ಬ್ರಹ್ಮಾವರದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಲೋಕಸಭೆಯಲ್ಲಿ ಭಾಷಾಂತರಕಾರರು ಇರುವುದರಿಂದ ಕನ್ನಡದಲ್ಲಿಯೂ ಮಾತನಾಡಬಹುದು. ಆದರೆ, ಅಧಿಕಾರಿಗಳು ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವಾಗ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಜ್ಞಾನ ಅಗತ್ಯ ಎಂದು ಹೇಳಿಕೆ ನೀಡಿದ್ದೆ. ಸಂಸದನಾಗಿ ಸೇವೆ ಸಲ್ಲಿಸಿದ ಅನುಭವದಲ್ಲಿ ಹೇಳಿಕೆ ನೀಡಿದ್ದೇನೆಯೇ ಹೊರತು ಯಾರನ್ನೂ ಉದ್ದೇಶಿಸಿ ಹೇಳಿಲ್ಲ. ಹೇಳಿಕೆಯನ್ನು ತಿರುಚಿ ಮತ್ತೊಬ್ಬರ ಹೆಸರಿಗೆ ಜೋಡಿಸುವ ಚಾಳಿ ನಿಲ್ಲಿಸಬೇಕು. ರಾಜಕೀಯ ಜೀವನದಲ್ಲಿ ಚುನಾವಣೆಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಎದುರಿಸಿದ್ದೇನೆ. ಎದುರಾಳಿಗಳನ್ನು ಸೌಜನ್ಯಯುತ ಹಾಗೂ ಗೌರವದಿಂದ ಕಂಡಿದ್ದೇನೆ. ಅಪಪ್ರಚಾರ ಹಾಗೂ ವದಂತಿ ಮಾಡಿಲ್ಲ’ ಎಂದು ಹೆಗ್ಡೆ ತಿಳಿಸಿದ್ದಾರೆ.