ಡೈಲಿ ವಾರ್ತೆ: 30/Mar/2024
ಕಡಲ್ಗಳ್ಳರಿಂದ ಇರಾನ್ ಹಡಗು: 23 ಪಾಕಿಸ್ತಾನೀಯರ ರಕ್ಷಿಸಿದ ಭಾರತೀಯ ನೌಕಾಪಡೆ!
ನವದೆಹಲಿ: ಇರಾನ್ನ ಮೀನುಗಾರಿಕಾ ಹಡಗೊಂದರ ಮೇಲೆ ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರು ದಾಳಿ ನಡೆಸಿದ್ದು, ಕೊನೆಗೆ ಭಾರತೀಯ ನೌಕಾಪಡೆ ಸತತ 12 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಹಡಗನ್ನು ರಕ್ಷಣೆ ಮಾಡಿದೆ.
ಅದರಲ್ಲಿದ್ದ 23 ಪಾಕಿಸ್ತಾನೀಯರನ್ನೂ ರಕ್ಷಿಸಿದೆ. ಮಾರ್ಚ್ 28 ರಂದು ತಡರಾತ್ರಿ ಇರಾನಿನ (Iran) ಮೀನುಗಾರಿಕಾ ಹಡಗು ‘ಅಲ್-ಕಂಬಾರ್ 786′ ಮೇಲೆ ಕಡಲ್ಗಳ್ಳರು ದಾಳಿ ನಡೆಸಿದ ಬಗ್ಗೆ ನೌಕಾಪಡೆಗೆ ಮಾಹಿತಿ ದೊರೆತಿತ್ತು. ಹೀಗಾಗಿ, ಸಾಗರ ಭದ್ರತಾ ಕಾರ್ಯಾಚರಣೆಗಳಿಗಾಗಿ ಅರಬ್ಬಿ ಸಮುದ್ರದಲ್ಲಿ ನಿಯೋಜಿಸಲಾಗಿದ್ದ ಎರಡು ನೌಕೆಗಳನ್ನು ಕಡಲ್ಗಳ್ಳರ ದಾಳಿಗೆ ಸಿಲುಕಿರುವ ಇರಾನ್ನ ಹಡಗಿನ ರಕ್ಷಣೆಗೆ ಕಳುಹಿಸಲಾಯಿತು.
ಕಡಲ್ಗಳ್ಳರು ಶರಣಾದ ನಂತರ ಭಾರತೀಯ ನೌಕಾಪಡೆಯ ತಂಡಗಳು ಹಡಗನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡು ಶುಚಿಗೊಳಿಸಿದವು. ಆ ಹಡಗನ್ನು ದಡದತ್ತ ಕೊಂಡೊಯ್ಯುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು. ಇದೀಗ ನಿರ್ದಿಷ್ಟ ಪ್ರದೇಶದಲ್ಲಿ ನಿರಾತಂಕವಾಗಿ ಸಾಮಾನ್ಯ ಮೀನುಗಾರಿಕೆ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಲಾಗಿದೆ.